ಸುರತ್ಕಲ್‌: ನಮ್ಮ ಸಂಸ್ಕೃತಿಯ ಜ್ಞಾನ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು. ಈ ಪರಂಪರೆ ಯಾರಿಗೂ ಕೇಡನ್ನು ಬಯಸಲಿಲ್ಲ. ಹಾಗಾಗಿ ಜ್ಞಾನದ ಸಂಕೇತವಾದ ದೀಪವನ್ನು ಬೆಳಗುವಾಗ ನಾವು ‘ಶತ್ರು ಬುದ್ಧಿ ವಿನಾಶಾಯ’ ಎಂದು ಹೇಳುತ್ತೇವೆಯೇ ವಿನಃ, ಶತ್ರು ವಿನಾಶವಾಗಲಿ ಎಂದು ಪ್ರಾರ್ಥಿಸುವುದಿಲ್ಲ ಎಂದು ಕುಟುಂಬ ಪ್ರಬೋಧನ್ ನ ಅಖಿಲ ಭಾರತೀಯ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಹೇಳಿದರು.

ಸುರತ್ಕಲ್‌ ನಲ್ಲಿ ಮಂಥನ ಸುರತ್ಕಲ್ ವತಿಯಿಂದ ‘ಭಾರತೀಯ ಜ್ಞಾನ ಪರಂಪರೆ’ ಎಂಬ ವಿಷಯದ ಕುರಿತು ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಅವರು ಮಾತನಾಡಿದರು.

ನಮ್ಮ ದೇಶದ ಚಿಂತನಗೆಳು ಬಹಳ ಅದ್ಬುತವಾದದ್ದು. ಈ ನಾಡಿನ ಶ್ರೇಷ್ಠ ಚಿಂತನೆಗಳನ್ನೊಳಗೊಂಡಿರುವ ವೇದಗಳನ್ನು ಬರೆದದ್ದಲ್ಲ, ಅವುಗಳನ್ನು ಕಂಡುಕೊಂಡದ್ದು. ಅದರಲ್ಲಿ ಅದ್ಭುತವಾದಂತಹ ಅಧ್ಯಯನ ಪೂರ್ಣ ವಿಷಯಗಳಿವೆ. ಭಾಷೆ, ರಾಮಾಯಣ, ಮಹಾಭಾರತದಂತಹ ಮಹಾನ್ ಗ್ರಂಥಗಳು, ವೇದ, ಉಪನಿಷತ್‌ ಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ನುಡಿದರು.

ಅದಮ್ಯವಾದ ಶಕ್ತಿ ನಮ್ಮ ನಾಡಿನ ಮಕ್ಕಳಿಗಿದೆ. ಆದರೆ ಅದನ್ನು ತಿಳಿಸಿಕೊಡುವ ವ್ಯವಸ್ಥೆ ಇರಬೇಕು. ನಮ್ಮ ದೇಶದಲ್ಲಿ ಮೊದಲಿದ್ದ ಶಿಕ್ಷಣ ಪದ್ಧತಿ ಅತ್ಯಂತ ಸರಳವಾಗಿ ಅನೇಕ ಕ್ಲಿಷ್ಟಕರ ಸಂಗತಿಯನ್ನು ತಿಳಿಸಿಕೊಡುತ್ತಿತ್ತು. ಅತ್ಯಂತ ಹೆಚ್ಚು ಸಂಗತಿಗಳನ್ನು ನೆನಪಿನಲ್ಲಿಡುವಂತೆ ಮಾಡುತ್ತಿತ್ತು. ಆದರೆ ಇಂದಿನ ಶಿಕ್ಷಣ ಪದ್ಧತಿ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಎಡವಿದೆ ಎಂದು ತಿಳಿಸಿದರು.

ಭಾರತೀಯ ಜ್ಞಾನ ಪರಂಪರೆಗಳ ವೈಶಿಷ್ಟ್ಯತೆಗಳಲ್ಲಿ ಶ್ರದ್ಧೆ ಮತ್ತು ಭಕ್ತಿಯೂ ಪ್ರಮುಖವಾದದ್ದು. ಇದನ್ನು ಇಂದಿನ ಪೀಳಿಗೆಯ ಮಕ್ಕಳಲ್ಲಿ ಅಳವಡಿಸುವಲ್ಲಿ ನಾವು ಸೋತಿದ್ದೇವೆ. ಪ್ರಸ್ತುತ ಇದನ್ನು ಕಲಿಸಿಕೊಡುವ ಜವಾಬ್ದಾರಿ ಯಾರದು ಎಂಬ ಪ್ರಶ್ನೆ ಉದ್ಭವಾದಾಗಲೆಲ್ಲ ಕಳವಳ ವ್ಯಕ್ತವಾಗುವ ಪರಿಸ್ಥಿತಿ ಎದುರಾಗಿದೆ. ನಮ್ಮ ಎಲ್ಲಾ ವ್ಯವಸ್ಥೆಗಳ ಆಧಾರ ಸ್ತಂಭಗಳು ಶ್ರದ್ಧೆ ಮತ್ತು ಭಕ್ತಿಯೇ ಆಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯ ಜ್ಞಾನ ಪರಂಪರೆಯ ಕುರಿತು ಮಹತ್ವ ನೀಡುವ ಕೆಲಸ ಪ್ರಸ್ತುತ ನಡೆಯುತ್ತಿದೆ. ಕಳೆದ ಹತ್ತು ವರ್ಷಗಳಿಂದ ಭಾರತ ಎಲ್ಲಾ ರೀತಿನಲ್ಲಿಯೂ ಬಹಳ ವೇಗವಾಗಿ ಮುಂದುವರೆಯುತ್ತಿದೆ. ಪ್ರಸ್ತುತ ತಂತ್ರಜ್ಞಾನದ ಮೂಲಕ ಮಾಹಿತಿಗಳನ್ನು ಸಂಗ್ರಹಿಸುವುದಕ್ಕೆ ಸಹಕಾರಿಯಾಗುವ ವ್ಯವಸ್ಥೆಯಿದ್ದು ನಮಗೆ ಎಲ್ಲಾ ರೀತಿಯ ಮಾಹಿತಿಗಳು ಸಿಗುವಂತಾಗಿದೆ. ಆದರೆ ಅವುಗಳಲ್ಲಿ ನಮಗೆ ಬೇಕಾದ ಅಂಶಗಳನ್ನು ಮಾತ್ರ ತೆಗೆದುಕೊಂಡು ಮುಂದುವರಿಯುವುದು ಒಳಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರತ್ಕಲ್ ನಗರ ಸಂಘಚಾಲಕ ಶ್ರೀರಂಗ ಭಟ್ ಮಾಳಿಗೆ ವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.