ನಾಗ್ಪುರ, 24 ಅಕ್ಟೋಬರ್, 2023

ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಆದರಣೀಯ ಶ್ರೀ ಶಂಕರ ಮಹಾದೇವನ್ ಅವರೇ, ವೇದಿಕೆಯಲ್ಲಿ ಉಪಸ್ಥಿತರಿರುವ ಮಾನ್ಯ ಸರಕಾರ್ಯವಾಹರೇ, ವಿದರ್ಭ ಪ್ರಾಂತದ ಮಾನ್ಯ ಸಂಘಚಾಲಕರೇ, ನಾಗಪುರ ಮಹಾನಗರದ ಮಾನ್ಯ ಸಂಘಚಾಲಕರೇ, ನಾಗಪುರ ಮಹಾನಗರದ ಮಾನ್ಯ ಸಹಸಂಘಚಾಲಕರೇ, ಇತರ ಅಧಿಕಾರಿಗಳೇ, ನಾಗರಿಕ ಸಜ್ಜನರೇ, ಮಾತಾ ಭಗಿನಿಯರೇ ಮತ್ತು ಆತ್ಮೀಯ ಸ್ವಯಂಸೇವಕ ಬಂಧುಗಳೇ,

ದಾನವತೆಯ ಮೇಲೆ ಮಾನವತೆ ಪೂರ್ಣ ವಿಜಯ ಸಾಧಿಸಿದ ಶಕ್ತಿಪರ್ವದ ಸಂಕೇತವಾಗಿ ನಾವು ಪ್ರತಿವರ್ಷವೂ ವಿಜಯದಶಮಿ ಉತ್ಸವವನ್ನು ಆಚರಿಸುತ್ತೇವೆ. ಈ ವರ್ಷದ ಉತ್ಸವವು ನಮ್ಮ ಗೌರವ, ಹರ್ಷೋಲ್ಲಾಸ ಮತ್ತು ಉತ್ಸಾಹವನ್ನು ಹೆಚ್ಚಿಸುವ ಘಟನೆಗಳನ್ನು ತನ್ನೊಂದಿಗೆ ತಂದಿದೆ.

ಕಳೆದ ವರ್ಷವಿಡೀ ನಮ್ಮ ದೇಶವು ಜಿ-20 ಹೆಸರಿನಲ್ಲಿ ಸೇರುವ ಪ್ರಮುಖ ದೇಶಗಳ ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿತ್ತು. ವರ್ಷವಿಡೀ ಸದಸ್ಯ ರಾಷ್ಟ್ರಗಳ ರಾಷ್ಟ್ರ ಪ್ರಮುಖರು, ಮಂತ್ರಿಗಳು, ಶಾಸಕರು ಮತ್ತು ಚಿಂತಕರೊಡನೆ ಅನೇಕ ಕಾರ್ಯಕ್ರಮಗಳು ಭಾರತದ ಅನೇಕ ಸ್ಥಳಗಳಲ್ಲಿ ನಡೆಯಿತು. ಭಾರತೀಯರ ಆತ್ಮೀಯ ಆತಿಥ್ಯದ ಅನುಭವ, ಭಾರತದ ಗೌರವಶಾಲಿ ಇತಿಹಾಸ ಮತ್ತು ವರ್ತಮಾನದ ಉತ್ಸಾಹಭರಿತ ಅಭ್ಯುದಯವು ಎಲ್ಲಾ ಸಹಭಾಗಿಗಳನ್ನೂ ಪ್ರಭಾವಿತರನ್ನಾಗಿಸಿತು. ಆಫ್ರಿಕನ್ ಯೂನಿಯನ್ ಅನ್ನು ಸದಸ್ಯ ರಾಷ್ಟ್ರವನ್ನಾಗಿ ಸ್ವೀಕರಿಸುವಂತೆ ಹಾಗೂ ಶೃಂಗಸಭೆಯ ಮೊದಲನೆಯ ದಿನವೇ ಘೋಷಣಾ ಪ್ರಸ್ತಾವಕ್ಕೆ (Declaration Resolution) ಸರ್ವರ ಅನುಮೋದನೆಯನ್ನು ಪಡೆಯುವಲ್ಲಿ ಭಾರತದ ಪ್ರಾಮಾಣಿಕ ಸದ್ಭಾವನೆ ಮತ್ತು ರಾಜನೈತಿಕ ಕೌಶಲ್ಯವು ಎಲ್ಲರ ಅನುಭವಕ್ಕೆ ಬಂದಿತು. ಭಾರತದ ವಿಶಿಷ್ಟ ವಿಚಾರ ಮತ್ತು ದೃಷ್ಟಿಯ ಕಾರಣದಿಂದಾಗಿ ಸಂಪೂರ್ಣ ವಿಶ್ವದ ಚಿಂತನೆಯಲ್ಲಿ ‘ವಸುಧೈವ ಕುಟುಂಬಕಂ’ ಎಂಬ ದಿಶೆಯು ಸೇರಿಸಲ್ಪಟ್ಟಿತು. ಜಿ-20ರ ಅರ್ಥಕೇಂದ್ರಿತ ವಿಚಾರವು ಈಗ ಮಾನವಕೇಂದ್ರಿತ ವಿಚಾರವಾಗಿದೆ. ವೈಶ್ವಿಕ ವೇದಿಕೆಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವಾಗಿ ದೃಢಪೂರ್ವಕವಾಗಿ ಸ್ಥಾಪಿಸುವ ಅಭಿನಂದನೀಯ ಕಾರ್ಯವನ್ನು ಈ ಕಾರ್ಯಕ್ರಮದ ಮೂಲಕ ನಮ್ಮ ನೇತೃತ್ವವು ಮಾಡಿದೆ.

ಈ ಬಾರಿ ನಮ್ಮ ದೇಶದ ಕ್ರೀಡಾಪಟುಗಳು ಏಷಿಯಾಡ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ 100ಕ್ಕೂ ಅಧಿಕ ಅಂದರೆ ಒಟ್ಟು 107 ಪದಕ (28 ಸ್ವರ್ಣ, 38 ಬೆಳ್ಳಿ ಮತ್ತು 41 ಕಂಚು) ಗಳನ್ನು ಗೆದ್ದು ನಮ್ಮೆಲ್ಲರ ಉತ್ಸಾಹವನ್ನು ಹೆಚ್ಚಿಸಿದ್ದಾರೆ. ಅವರೆಲ್ಲರಿಗೂ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಭಾರತದ ಶಕ್ತಿ, ಬುದ್ಧಿ ಹಾಗೂ ಯುಕ್ತಿಯ ಮಿಂಚುನೋಟವನ್ನು ಚಂದ್ರಯಾನದ ಸಂದರ್ಭದಲ್ಲೂ ವಿಶ್ವವೇ ನೋಡಿದೆ. ನಮ್ಮ ವಿಜ್ಞಾನಿಗಳ ಶಾಸ್ತ್ರಜ್ಞಾನ ಮತ್ತು ತಂತ್ರಕುಶಲತೆಯ ಜೊತೆಗೆ ನೇತೃತ್ವದ ಇಚ್ಛಾಶಕ್ತಿಯೂ ಸೇರಿಕೊಂಡಿತ್ತು. ಅಂತರಿಕ್ಷದ ಯುಗದ ಇತಿಹಾಸದಲ್ಲಿ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ವಿಕ್ರಂ ಲ್ಯಾಂಡರ್ ಇಳಿಯಿತು. ಎಲ್ಲ ಭಾರತೀಯರ ಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ ವಿಜ್ಞಾನಿಗಳನ್ನು ಮತ್ತು ಅವರಿಗೆ ಶಕ್ತಿಯನ್ನು ನೀಡಿದ ನೇತೃತ್ವವು ಇಡೀ ದೇಶದಲ್ಲಿ ಅಭಿನಂದಿತವಾಗುತ್ತಿದೆ.

ಸಂಪೂರ್ಣ ರಾಷ್ಟ್ರದ ಪುರುಷಾರ್ಥದ ಮೂಲವು, ಆ ರಾಷ್ಟ್ರವನ್ನು ಜಗತ್ತಿಗೆ ಪ್ರಯೋಜನವಾಗುವಂತೆ ಸಿದ್ಧಗೊಳಿಸುವ ರಾಷ್ಟ್ರೀಯ ಆದರ್ಶದಲ್ಲಿದೆ. ಇದಕ್ಕಾಗಿಯೇ ನಮ್ಮ ಸಂವಿಧಾನದ ಮೂಲ ಪ್ರತಿಯ ಹಿಂಭಾಗದಲ್ಲಿ ಯಾವ ಚಿತ್ರವನ್ನು ಹಾಕಲಾಗಿದೆಯೋ ಅಂತಹ ಧರ್ಮದ ಮೂರ್ತಿವೆತ್ತ ಪ್ರತೀಕವಾದ ಶ್ರೀರಾಮನ ಬಾಲಕ ರೂಪದ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಮುಂಬರುವ ಜನವರಿ 22ರಂದು ಮಂದಿರದ ಗರ್ಭಗೃಹದಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ ಎಂಬುದಾಗಿ ಘೋಷಣೆಯಾಗಿದೆ. ವ್ಯವಸ್ಥೆಯಲ್ಲಿರುವ ಕಷ್ಟಗಳು ಮತ್ತು ಸುರಕ್ಷತೆ ಕುರಿತು ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಪಾವನ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸೀಮಿತ ಸಂಖ್ಯೆಯ ಜನರಷ್ಟೇ ಉಪಸ್ಥಿತರಿರಲು ಸಾಧ್ಯ. ಶ್ರೀರಾಮನು ನಮ್ಮ ದೇಶದ ಘನತೆವೆತ್ತ ಆಚರಣೆಯ ಪ್ರತೀಕ, ಕರ್ತವ್ಯ ಪಾಲನೆಯ ಪ್ರತೀಕ‌ ಹಾಗೂ ಸ್ನೇಹ ಮತ್ತು ಕರುಣೆಯ ಪ್ರತೀಕ. ತಮ್ಮ ತಮ್ಮ ಸ್ಥಾನದಲ್ಲಿದ್ದುಕೊಂಡೇ ಈ ರೀತಿಯ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರವೇಶದಿಂದ ಪ್ರತಿಯೊಂದು ಹೃದಯದಲ್ಲೂ ನಮ್ಮ ಮನಸ್ಸಿನ ರಾಮನನ್ನು ಜಾಗೃತಗೊಳಿಸುತ್ತಾ, ಮನಸ್ಸಿನ ಅಯೋಧ್ಯೆಯನ್ನು ಸಾಲಂಕೃತಗೊಳಿಸಿ, ಎಲ್ಲೆಡೆಯೂ ಸ್ನೇಹ, ಪುರುಷಾರ್ಥ ಮತ್ತು ಸದ್ಭಾವನೆಯ ವಾತಾವರಣವನ್ನು ನಿರ್ಮಿಸಲು ಅನೇಕ ಸ್ಥಾನಗಳಲ್ಲಿ ಸಣ್ಣಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ.

ಶತಮಾನಗಳ ಕಾಲ ಕಾಡಿದ ಸಂಕಟಗಳೊಡನೆ ಹೋರಾಡಿ ಯಶಸ್ವಿಯಾಗಿ, ಇದೀಗ ನಮ್ಮ ಭಾರತವು ಭೌತಿಕವಾಗಿ ಮತ್ತು ಆಧ್ಯಾತ್ಮಿಕ ಉನ್ನತಿಯ ಪಥದಲ್ಲಿ ದೃಢವಾಗಿ ಮುನ್ನಡೆಯುತ್ತಿದೆ. ಇದನ್ನು ಸೂಚಿಸುತ್ತಿರುವ ಈ ಘಟನೆಗಳಿಗೆ ಸಾಕ್ಷಿಯಾಗುವ ಸೌಭಾಗ್ಯ ನಮಗೆಲ್ಲರಿಗೂ ದೊರೆತಿದೆ.

ಇಡೀ ಜಗತ್ತಿಗೆ ತಮ್ಮ ಜೀವನದ ಮೂಲಕ ಅಹಿಂಸೆ, ಜೀವದಯೆ ಮತ್ತು ಸದಾಚಾರವನ್ನು ಕಲಿಸುವ  ಸತ್ಪಥವನ್ನು ತೋರಿದ ಶ್ರೀ ಮಹಾವೀರ ಸ್ವಾಮಿಯವರ ನಿರ್ವಾಣದ 2550ನೇ ವರ್ಷ ಇದಾಗಿದೆ. ಅದೇ ರೀತಿ, 350 ವರ್ಷಗಳಷ್ಟು ಹಿಂದೆಯೇ ವಿದೇಶೀಯರಿಂದ ಹೇರಲ್ಪಟ್ಟ ಪಾರತಂತ್ರ‍್ಯದಿಂದ ಮುಕ್ತಿಯ ಮಾರ್ಗವನ್ನು ತೋರಿಸಿ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದ ಮತ್ತು ನ್ಯಾಯಪೂರ್ಣ ಜನಹಿತಕಾರಿ ಆಡಳಿತವನ್ನು ರೂಪಿಸಿದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರು ರಾಜ್ಯಾಭಿಷಿಕ್ತರಾದ 350ನೇ ವರ್ಷವೂ ಇದಾಗಿದೆ. ಇಂಗ್ಲೀಷರ ಪಾರತಂತ್ರ‍್ಯದಿಂದ ಮುಕ್ತರಾಗಲು ಇಡೀ ದೇಶದ ಜನಮಾನಸಕ್ಕೆ ತಮ್ಮ ‘ಸ್ವ’ತ್ವದ ಸ್ಪಷ್ಟ ಮತ್ತು ಯಥಾತಥ್ಯ ದರ್ಶನವನ್ನು ತಮ್ಮ ‘ಸತ್ಯಾರ್ಥ ಪ್ರಕಾಶ’ದ ಮೂಲಕ ಮಾಡಿಸಿದ ಮಹರ್ಷಿ ದಯಾನಂದ ಸರಸ್ವತಿಯವರ 200 ನೇ ಜಯಂತಿಯನ್ನೂ ನಾವು ಈ ವರ್ಷ ಆಚರಿಸಿದ್ದೇವೆ. ಮುಂಬರುವ ವರ್ಷವು ಈ ರೀತಿ ರಾಷ್ಟ್ರೀಯ ಪುರುಷಾರ್ಥದ ಶಾಶ್ವತ ಪ್ರೇರಣೆ ನೀಡಿದ ಇಬ್ಬರು ಮಹಾಪುರುಷರ ಸ್ಮರಣೆಯ ವರ್ಷವೂ ಹೌದು. ಅಸ್ಮಿತೆ ಮತ್ತು ಸ್ವಾತಂತ್ರ‍್ಯಕ್ಕಾಗಿ ಬಲಿದಾನ ನೀಡಬಲ್ಲ ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮದೊಂದಿಗೆ ತಮ್ಮ ಆಡಳಿತ ಕೌಶಲ್ಯ ಹಾಗೂ ಪ್ರಜಾಹಿತ ದಕ್ಷತೆಗಾಗಿ ಆದರ್ಶಳಾದ ಮಹಾರಾಣಿ ದುರ್ಗಾವತಿ ಅವರ 500ನೇ ಜಯಂತಿ ವರ್ಷವಿದು. ಭಾರತೀಯ ಮಹಿಳೆಯರಿಗೆ ಸರ್ವಗಾಮಿ ಕರ್ತವ್ಯ, ನೇತೃತ್ವ, ಕ್ಷಮತೆ, ಉಜ್ವಲಶೀಲ ಮತ್ತು ಜಾಜ್ವಲ್ಯ ದೇಶಭಕ್ತಿ – ಇವುಗಳಿಗೆ ಅವರು ದೇದೀಪ್ಯಮಾನ ಆದರ್ಶರಾಗಿದ್ದಾರೆ.

ಇದೇ ರೀತಿ ತನ್ನ ಪ್ರಜಾಹಿತ ದಕ್ಷತೆ ಮತ್ತು ಶಾಸನಪಟುತ್ವದ ಜೊತೆಗೆ ಸಾಮಾಜಿಕ ವಿಷಮತೆಯನ್ನು ಬೇರುಸಹಿತ ಕಿತ್ತೊಗೆಯಲು ಜೀವನಪೂರ್ತಿ ತನ್ನ ಸಂಪೂರ್ಣ ಶಕ್ತಿಯನ್ನು ಸುರಿದು ಕೆಲಸ ಮಾಡಿದ ಕೊಲ್ಹಾಪುರದ (ಮಹಾರಾಷ್ಟ್ರ) ರಾಜನಾಗಿದ್ದ ಛತ್ರಪತಿ ಶಾಹೂಜಿ ಮಹಾರಾಜ್ ಅವರ 150ನೇ ಜಯಂತಿ ವರ್ಷವೂ ಆಗಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಯಾರು ತಮ್ಮ ಜೀವನದ ತಾರುಣ್ಯದಲ್ಲೇ ಹೋರಾಟ ಪ್ರಾರಂಭಿಸಿ, ಬಡವರಿಗೆ ಅನ್ನದಾನ ಕಾರ್ಯಕ್ರಮಕ್ಕೆ ಅವರು ಹೊತ್ತಿಸಿದ ಅಡಿಗೆಯ ಒಲೆ ಇಂದಿಗೂ ತಮಿಳುನಾಡಿನಲ್ಲಿ ಉರಿಯುತ್ತಿದೆಯೋ ಮತ್ತು ಅವರ ಕಾರ್ಯ ನಡೆಯುತ್ತಿದೆಯೋ ಅಂತಹಾ ತಮಿಳು ಸಂತ ಶ್ರೀಮದ್ ರಾಮಲಿಂಗ ವಲ್ಲಲಾರ್ ಅವರ 200ನೇ ವರ್ಷವೂ ಇದೇ ತಿಂಗಳು ಸಂಪನ್ನಗೊಂಡಿತು. ಸ್ವಾತಂತ್ರ‍್ಯದ ಜೊತೆಗೆ ಸಮಾಜದ ಆಧ್ಯಾತ್ಮಿಕ, ಸಾಂಸ್ಕೃತಿಕ ಜಾಗೃತಿ ಮತ್ತು ಸಾಮಾಜಿಕ ವಿಷಮತೆಯ ಸಂಪೂರ್ಣ ನಿರ್ಮೂಲನಕ್ಕಾಗಿ ಅವರು ಜೀವನಪೂರ್ತಿ ಕಾರ್ಯ ಮಾಡಿದವರು.

ಈ ರೀತಿಯ ಪ್ರೇರಣಾದಾಯಿ ಮಹಾಪುರುಷರ ಜೀವನ ಸ್ಮರಣೆಯ ಮೂಲಕ ನಮಗೆಲ್ಲರಿಗೂ ನಮ್ಮ ಸ್ವಾತಂತ್ರ‍್ಯದ ಅಮೃತ ಮಹೋತ್ಸವವು ಸಂಪನ್ನಗೊಳ್ಳುವ ಸಂದರ್ಭದಲ್ಲಿ ಸಾಮಾಜಿಕ ಸಮತೆ, ಏಕಾತ್ಮತೆ ಮತ್ತು ನಮ್ಮ ‘ಸ್ವ’ತ್ವದ ರಕ್ಷಣೆಯ ಸಂದೇಶ ಲಭ್ಯವಾಗುತ್ತದೆ.

ತಮ್ಮ ‘ಸ್ವ’ತ್ವವನ್ನು, ತಮ್ಮ ಅಸ್ಮಿತೆಯನ್ನು ಸುರಕ್ಷಿತವಾಗಿಡಲು ಮನುಷ್ಯರಿಗೆ ಇಚ್ಛೆಯಿರುವುದು ಸ್ವಾಭಾವಿಕವೇ ಆಗಿದೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಿಸುವುದೂ ಸಹಜವೇ ಆಗಿದೆ. ಪರಸ್ಪರ ದಿಢೀರನೆ ಹತ್ತಿರವಾಗುತ್ತಿರುವ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ಇತ್ತೀಚೆಗೆ ಈ ರೀತಿಯ ಚಿಂತನೆ ನಡೆಸುವ ಪ್ರವೃತ್ತಿ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಇಡೀ ಜಗತ್ತಿಗೆ ಒಂದೇ ಬಣ್ಣವನ್ನು ಬಳಿಯುವ, ಏಕರೂಪತೆಯ ಯಾವ ಪ್ರಯತ್ನವೂ ಇಂದಿನವರೆಗೆ ಸಫಲಗೊಂಡಿಲ್ಲ, ಮುಂದೆಯೂ ಸಫಲಗೊಳ್ಳುವುದಿಲ್ಲ. ಭಾರತದ ಅಸ್ಮಿತೆಯನ್ನು, ಹಿಂದು ಸಮಾಜದ ಅಸ್ಮಿತೆಯನ್ನು ಸಂರಕ್ಷಿಸುವ ವಿಚಾರವು ಸ್ವಾಭಾವಿಕವೇ ಆಗಿದೆ. ಇಂದು ಜಗತ್ತಿನ ವರ್ತಮಾನಕಾಲದ ಆವಶ್ಯಕತೆಗಳನ್ನು ಪೂರ್ಣಗೊಳಿಸಲು, ನಮ್ಮ ಸ್ವಂತದ ಮೌಲ್ಯವನ್ನು ಆಧರಿಸಿದ, ಕಾಲಕ್ಕೆ ತಕ್ಕ, ಹೊಸ ರೂಪಬಣ್ಣಗಳಲ್ಲಿ ಭಾರತವು ಎದ್ದುನಿಲ್ಲಬೇಕೆನ್ನುವುದು ಜಗತ್ತಿನ ಅಪೇಕ್ಷೆಯೂ ಆಗಿದೆ. ಮತೀಯ ಸಾಂಪ್ರದಾಯಿಕತೆಯಿಂದ ಉತ್ಪನ್ನವಾಗಿರುವ ಮತಾಂಧತೆ, ಅಹಂಕಾರ ಮತ್ತು ಉನ್ಮಾದಗಳನ್ನು ಜಗತ್ತು ಎದುರಿಸುತ್ತಿವೆ. ಸ್ವಾರ್ಥದ ಮುಖಾಮುಖಿ ಮತ್ತು ಮೂಲಭೂತವಾದದ ಕಾರಣಗಳಿಂದ ಉತ್ಪನ್ನವಾಗಿರುವ ಉಕ್ರೇನ್ ನ ಅಥವಾ ಗಾಜಾ ಪಟ್ಟಿಯ ಯುದ್ಧದಂತಹ ಕಲಹಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥ ಮತ್ತು ನಿಯಂತ್ರಣವಿಲ್ಲದ ಉಪಭೋಗದ ಕಾರಣದಿಂದ ಹೊಸ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ. ವಿಕೃತಿಗಳು ಮತ್ತು ಅಪರಾಧಗಳು ಹೆಚ್ಚುತ್ತಿವೆ. ಮಿತಿಯಿಲ್ಲದ ವ್ಯಕ್ತಿವಾದದ ಕಾರಣದಿಂದ ಕುಟುಂಬಗಳು ಛಿದ್ರಗೊಳ್ಳುತ್ತಿವೆ. ಪ್ರಕೃತಿಯ ಮಿತಿಮೀರಿದ ಶೋಷಣೆಯಿಂದ ಮಾಲಿನ್ಯ, ಜಾಗತಿಕ ತಾಪಮಾನದಲ್ಲಿ ಏರಿಕೆ, ಋತುಗಳ ವ್ಯವಸ್ಥೆಯಲ್ಲಿ ಅಸಂತುಲನ ಮತ್ತು ಅದರ ಫಲವಾಗಿ ಹುಟ್ಟುವ ನೈಸರ್ಗಿಕ ದುರಂತಗಳೂ (Resultant Natural Disasters) ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಆತಂಕವಾದ, ಶೋಷಣೆ ಮತ್ತು ನಿರಂಕುಶತೆ (totalitarianism) ಗಳಿಗೆ ತೆರೆದ ಮೈದಾನ ಸಿಕ್ಕಂತಾಗಿದೆ. ತನ್ನ ಅಸಮರ್ಪಕ ದೃಷ್ಟಿಯಿಂದಾಗಿ ಜಗತ್ತು ಈ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ ನಮ್ಮ ಸನಾತನ ಮೌಲ್ಯಗಳ ಮತ್ತು ಸಂಸ್ಕಾರಗಳ ಆಧಾರದ ಮೇಲೆ, ಭಾರತವು ತನ್ನ ಉದಾಹರಣೆಯ ಮೂಲಕ ಜಗತ್ತಿಗೆ ವಾಸ್ತವಿಕ ಸುಖ, ಶಾಂತಿಯ ಹೊಸಮಾರ್ಗವನ್ನು ತೋರಿಸಬೇಕಾದ ಅಪೇಕ್ಷೆ ಮೇಲೇಳುತ್ತಿದೆ.

ಈ ಪರಿಸ್ಥಿತಿಯ ಒಂದು ಸಣ್ಣ ಆವೃತ್ತಿಯು ಭಾರತ ದೇಶದಲ್ಲೂ ತನ್ನ ಮುಂದೆಯೇ ಜರುಗಿದೆ. ಉದಾಹರಣೆಗಾಗಿ, ಹಿಮಾಲಯದ ಪ್ರದೇಶಗಳಲ್ಲಿ ಹಿಮಾಚಲ ಮತ್ತು ಉತ್ತರಾಖಂಡದಿಂದ ಹಿಡಿದು ಸಿಕ್ಕಿಂವರೆಗೆ ಸತತವಾಗಿ ಪ್ರಾಕೃತಿಕ ವಿಪತ್ತುಗಳ ಪ್ರಾಣಾಂತಿಕ ಆಟವನ್ನು ನಾವು ನೋಡುತ್ತಿದ್ದೇವೆ. ಭವಿಷ್ಯದಲ್ಲಿ ಯಾವುದೇ ಗಂಭೀರ ಮತ್ತು ವ್ಯಾಪಕ ಸಂಕಟದ ಪೂರ್ವಾಭಾಸ ಈ ಘಟನೆಗಳ ಮೂಲಕ ಆಗುತ್ತದೆ ಎಂಬ ಆತಂಕಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

ದೇಶದ ಗಡಿಗಳ ಸುರಕ್ಷೆ, ಜಲ ಸುರಕ್ಷೆ ಮತ್ತು ಪರಿಸರದ ಸ್ವಾಸ್ಥ್ಯಗಳ ದೃಷ್ಟಿಯಿಂದ ಭಾರತದ ಉತ್ತರ ಭಾಗದ ಗಡಿಗಳನ್ನು ನಿರ್ಣಯಿಸುವ ಈ ಪ್ರದೇಶಗಳು ಅತ್ಯಂತ ಮಹತ್ವಪೂರ್ಣವಾಗಿವೆ.‌ ಯಾವುದೇ ಬೆಲೆ ತೆತ್ತಾದರೂ ಇವುಗಳನ್ನು ರಕ್ಷಿಸಿಕೊಳ್ಳಲೇಬೇಕಿದೆ. ಸುರಕ್ಷೆ, ಪರಿಸರ, ಜನಸಂಖ್ಯೆ ಮತ್ತು ವಿಕಾಸದ ದೃಷ್ಟಿಯಿಂದ ಈ ಇಡೀ ಪ್ರದೇಶವನ್ನು ಒಂದು ಘಟಕ ಎಂದು ಪರಿಗಣಿಸಿ ಹಿಮಾಲಯ ಪ್ರದೇಶದ ಕುರಿತು ಯೋಚಿಸಬೇಕಾಗುತ್ತದೆ. ಈ ಪ್ರಕೃತಿ ರಮಣೀಯ ಪ್ರದೇಶವು ಭೂಗರ್ಭಶಾಸ್ತ್ರದ ದೃಷ್ಟಿಯಿಂದ ನವೀನವಾದ, ಈಗಲೂ ರೂಪುಗೊಳ್ಳುತ್ತಿರುವ ಪ್ರದೇಶವಾಗಿದೆ. ಆದ್ದರಿಂದಲೇ ಅಸ್ಥಿರವೂ ಆಗಿದೆ. ಅಲ್ಲಿನ ಭೂಮೇಲ್ಮೈ, ಭೂಗರ್ಭ, ಜೀವವೈವಿಧ್ಯ ಮತ್ತು ಜಲಸಂಪತ್ತುಗಳ ವಿಶೇಷತೆಯನ್ನು ಅರ್ಥ ಮಾಡಿಕೊಳ್ಳದೆ ಅನಿಯಂತ್ರಿತ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಲಾಗಿದೆ. ಈ ಗೊಂದಲದ ಫಲಸ್ವರೂಪವಾಗಿ ಈ ಪ್ರದೇಶ ಮತ್ತು ಅದರ ಪರಿಣಾಮವಾಗಿ ಇಡೀ ದೇಶವು ಸಂಕಟದ ಅಂಚನ್ನು ತಲುಪುತ್ತಿದೆ. ಭಾರತವನ್ನೂ ಒಳಗೊಂಡಂತೆ ಏಷಿಯಾದ ಪೂರ್ವ ಮತ್ತು ದಕ್ಷಿಣಪೂರ್ವದ ಎಲ್ಲ ದೇಶಗಳ ನೀರಿನ ಆವಶ್ಯಕತೆಯನ್ನು ಪೂರೈಸುತ್ತಿರುವುದು ಇದೇ ಪ್ರದೇಶವಾಗಿದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಇದೇ ಪ್ರದೇಶದಲ್ಲಿನ ಭಾರತದ ಉತ್ತರ ಗಡಿಗಳಲ್ಲಿ ಚೀನಾದ ಉಪಟಳ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಹೀಗಾಗಿ ಈ ಪ್ರದೇಶದ ವಿಶಿಷ್ಟ ಭೂಗರ್ಭಶಾಸ್ತ್ರ, ಕಾರ್ಯತಂತ್ರ ಮತ್ತು ಭೂರಾಜಕೀಯಗಳು (Geological, Geo-strategic and Geo-political) ಮಹತ್ವ ಪಡೆದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶದ ಕುರಿತಾಗಿ ಪ್ರತ್ಯೇಕ ದೃಷ್ಟಿಕೋನದಿಂದ ಚಿಂತನೆ ನಡೆಸಬೇಕಾಗುತ್ತದೆ.

ಈ ಘಟನೆಗಳು ಹಿಮಾಲಯ ಪ್ರದೇಶದಲ್ಲಿ ಹೆಚ್ಚಾಗಿ ಘಟಿಸುತ್ತಿದ್ದರೂ, ಇಡೀ ದೇಶಕ್ಕೆ ಅದರ ಸ್ಪಷ್ಟ ಸಂಕೇತದ ಅರಿವಾಗುತ್ತಿದೆ. ಅಪೂರ್ಣ, ಅತಿ ಎನಿಸುವಷ್ಟು ಭೌತಿಕವಾದದ ಮತ್ತು ವಿಪರೀತ ಉಪಭೋಗವಾದದ ದೃಷ್ಟಿ ಆಧಾರಿತ ವಿಕಾಸ ಪಥದ ಕಾರಣದಿಂದಾಗಿ, ಮಾನವತೆ ಮತ್ತು ಪ್ರಕೃತಿಗಳು ನಿಧಾನವಾಗಿ ಆದರೆ ನಿಶ್ಚಿತವಾಗಿ ವಿನಾಶದತ್ತ ಮುನ್ನುಗ್ಗುತ್ತಿವೆ. ಇಡೀ ಜಗತ್ತಿನಲ್ಲಿ ಇದರ ಚಿಂತೆ ಹೆಚ್ಚುತ್ತಿದೆ. ಈ ಅಸಫಲ ಮಾರ್ಗವನ್ನು ತ್ಯಜಿಸಿ ಅಥವಾ ನಿಧಾನವಾಗಿ ವಾಪಾಸು ಮರಳಿ ಭಾರತೀಯ ಮೌಲ್ಯಾಧಾರಿತ ಹಾಗೂ ಭಾರತದ ಸಮಗ್ರ ಏಕಾತ್ಮ ದೃಷ್ಟಿ ಆಧಾರಿತ, ಕಾಲಕ್ಕೆ ಅನುಗುಣವಾದ, ತನ್ನದೇ ಆದ ಪ್ರತ್ಯೇಕ ವಿಕಾಸ ಮಾರ್ಗವನ್ನು ಭಾರತವು ಮಾಡಬೇಕಾಗಿದೆ. ಇದು ಭಾರತಕ್ಕೆ ಅತ್ಯಂತ ಉಪಯೋಗಕಾರಿಯಾದ ಮತ್ತು ಜಗತ್ತಿಗೂ ಅನುಕರಣೀಯವಾದ ಮಾದರಿ ಆಗಬಲ್ಲುದು. ವೈಫಲ್ಯದ ಹಾದಿಯಲ್ಲೇ ಉಳಿಯುವ, ಅಂಧಾನುಕರಣೆಯ, ಜಡತೆ ಮತ್ತು ಧರ್ಮಾಂಧತೆಯ ಪ್ರವೃತ್ತಿಯನ್ನು ಬಿಡಬೇಕಾಗುತ್ತದೆ. ವಸಾಹತುಶಾಹಿ ಮಾನಸಿಕತೆಯಿಂದ ಮುಕ್ತರಾಗಿ, ವಿಶ್ವದಿಂದ ಯಾವುದು ದೇಶಾನುಕೂಲವೋ ಅದನ್ನು ಪಡೆಯಬೇಕಾಗಿದೆ. ನಮ್ಮ ದೇಶದಲ್ಲಿ ಏನು ಇದೆಯೋ ಅದನ್ನು ಯುಗಾನುಕೂಲ ಮಾಡಿ, ನಮ್ಮ ‘ಸ್ವ’ ಆಧಾರಿತ ಸ್ವದೇಶೀ ವಿಕಾಸಮಾರ್ಗವನ್ನು ನಮ್ಮದಾಗಿಸಿಕೊಳ್ಳುವುದು ಈ ಸಮಯದ ಆವಶ್ಯಕತೆಯಾಗಿದೆ. ಈ ದೃಷ್ಟಿಯಿಂದ, ಇತ್ತೀಚಿನ ದಿನಗಳಲ್ಲಿ ಕೆಲವು ನೀತಿಗಳಲ್ಲಿ ಬದಲಾವಣೆಗಳು ಆಗಿವೆ ಎಂಬುದು ಗಮನಕ್ಕೆ ಬರುವ ಸಂಗತಿ. ಸಮಾಜದಲ್ಲಿಯೂ ಕೃಷಿ, ಕೈಗಾರಿಕೆ, ವ್ಯಾಪಾರ ತತ್ಸಂಬಂಧಿತ ಸೇವಾ ಕ್ಷೇತ್ರದಲ್ಲಿ, ಸಹಕಾರ ಮತ್ತು ಸ್ವಯಂ ಉದ್ಯೋಗ ಕ್ಷೇತ್ರಗಳಲ್ಲಿ ಹೊಸ ಯಶಸ್ವಿ ಪ್ರಯೋಗಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಆಡಳಿತ ಕ್ಷೇತ್ರದಲ್ಲಿ ಎಲ್ಲ ಕ್ಷೇತ್ರಗಳ ಬಗ್ಗೆಯೂ ಆಲೋಚಿಸುವ, ಮಾರ್ಗದರ್ಶನ ನೀಡುವ ಚಿಂತಕರಲ್ಲಿ ಈ ರೀತಿಯ ಜಾಗೃತಿಯ ಅಗತ್ಯತೆ ಹೆಚ್ಚಿದೆ. ಶಾಸಕಾಂಗದಲ್ಲಿ ‘ಸ್ವ’ ಆಧಾರಿತ ಯುಗಾನೂಕೂಲ ನೀತಿ, ಆಡಳಿತದ ತತ್ಪರತೆ, ತ್ವರಿತ ಪ್ರಶಾಸನ, ಸುವ್ಯವಸ್ಥಿತ ಮತ್ತು ಲೋಕಾಭಿಮುಖ ಜನಪರ ಕೆಲಸಗಳು ಮತ್ತು ಸಮಾಜದ ಮನಸ್ಸು, ಮಾತುಗಳು ಮತ್ತು ಕಾರ್ಯಗಳ ಮೂಲಕ ಸಮಾಜದ ಸಹಯೋಗ ಮತ್ತು ಬೆಂಬಲ ಮಾತ್ರ ದೇಶವನ್ನು ಬದಲಾವಣೆಯ ದಿಕ್ಕಿನಲ್ಲಿ ಮುನ್ನಡೆಸುತ್ತದೆ.

ಆದರೆ ಇದು ಸಾಧ್ಯವಾಗಬಾರದು ಎಂಬುದಕ್ಕೆ ವಿವಿಧ ಪ್ರಯತ್ನಗಳು ನಡೆಯುತ್ತಿವೆ.‌ ಸಮಾಜದ ಸಾಮೂಹಿಕತೆ ಭಿನ್ನ-ಭಿನ್ನವಾಗಿ ಪ್ರತ್ಯೇಕತೆ ಮತ್ತು ಸಂಘರ್ಷ ಹೆಚ್ಚಾಗಲು ಪ್ರಯತ್ನಗಳೂ ಹೆಚ್ಚಾಗುತ್ತಿವೆ. ನಮ್ಮ ಅಜ್ಞಾನ, ಅವಿವೇಕ, ಪರಸ್ಪರ ಅವಿಶ್ವಾಸ ಅಥವಾ ಅಸಡ್ಡೆಗಳಿಂದಾಗಿ ಸಮಾಜದಲ್ಲಿ ಕೆಲವೆಡೆ ಇಂತಹ ಅನಿರೀಕ್ಷಿತ ಗೊಂದಲಗಳು ಮತ್ತು ಒಡಕುಗಳು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಭಾರತದ ಉತ್ಥಾನದ ಉದ್ದೇಶವು ವಿಶ್ವಕಲ್ಯಾಣವೇ ಆಗಿದೆ. ಆದರೆ ಈ ಉತ್ಥಾನದ ಸ್ವಾಭಾವಿಕ ಪರಿಣಾಮದಿಂದಾಗಿ ಸ್ವಾರ್ಥ, ತಾರತಮ್ಯ ಮತ್ತು ಮೋಸದ ಆಧಾರದ ಮೇಲೆ ಅವರ ಸ್ವಾರ್ಥವನ್ನು ಸಾಧಿಸುವ ಶಕ್ತಿಗಳು ಸೀಮಿತವಾಗಿವೆ ಮತ್ತು ನಿಯಂತ್ರಿಸಲ್ಪಟ್ಟಿವೆ. ಆದ್ದರಿಂದ ಅವರಿಂದ ನಿರಂತರ ವಿರೋಧ ವ್ಯಕ್ತವಾಗುತ್ತದೆ. ಈ ಶಕ್ತಿಗಳು ಯಾವುದಾದರೊಂದು ವಿಚಾರಧಾರೆಯ ಮುಖವಾಡವನ್ನು ಧರಿಸಿದ್ದರೂ ಮತ್ತು ಕೆಲವು ಸಂತೋಷಕರವಾದ ಘೋಷಣೆ ಅಥವಾ ಗುರಿಗಾಗಿ ಕೆಲಸ ಮಾಡುತ್ತಿರುವಂತೆ ನಟಿಸುತ್ತಿದ್ದರೂ, ಅವರ ನಿಜವಾದ ಉದ್ದೇಶಗಳು ಬೇರೆಯೇ ಆಗಿರುತ್ತವೆ. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಬುದ್ಧಿಯಿಂದ ಕೆಲಸ ಮಾಡುವ ಜನರು ಯಾವುದೇ ವಿಚಾರಧಾರೆಯವರಾದರೂ, ಯಾವುದೇ ರೀತಿಯ ಕೆಲಸವನ್ನು ಮಾಡುತ್ತಿದ್ದರೂ ಅವರಿಗೆ ಉಪಟಳವೇ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ಈ ಸರ್ವಭಕ್ಷಕ ಶಕ್ತಿಗಳ ಜನರು ತಮ್ಮನ್ನು ತಾವು ಸಾಂಸ್ಕೃತಿಕ ಮಾರ್ಕ್ಸ್ ವಾದಿಗಳು ಅಥವಾ ವೋಕ್ (Woke) ಎಂದು ಕರೆದುಕೊಳ್ಳುತ್ತಾರೆ. ವೋಕ್ ಅಂದರೆ ಎಚ್ಚರಗೊಂಡವರು. ಆದರೆ ಅವರು 1920ರ ದಶಕದಿಂದಲೇ ಮಾರ್ಕ್ಸ್ ಅನ್ನು ಸಹ ಮರೆತಿದ್ದಾರೆ. ಅವರು ಪ್ರಪಂಚದ ಎಲ್ಲಾ ಸುವ್ಯವಸ್ಥೆ, ಮಾಂಗಲ್ಯ, ಸಂಸ್ಕಾರ ಹಾಗೂ ಸಂಯಮವನ್ನು ವಿರೋಧಿಸುತ್ತಾರೆ. ಈ ಬೆರಳೆಣಿಕೆಯಷ್ಟು ಜನರ ನಿಯಂತ್ರಣವು ಇಡೀ ಮಾನವ ಜನಾಂಗದ ಮೇಲೆ ಹೊಂದಲು ಅರಾಜಕತೆ ಮತ್ತು ಸ್ವೇಚ್ಛಾಚಾರವನ್ನು ಪುರಸ್ಕರಿಸುತ್ತಾರೆ, ಪ್ರಚಾರ ಮತ್ತು ಪ್ರಸಾರ ಮಾಡುತ್ತಾರೆ. ಮಾಧ್ಯಮಗಳು ಮತ್ತು ಅಕಾಡೆಮಿಗಳನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಮೂಲಕ ದೇಶದ ಶಿಕ್ಷಣ, ಸಂಸ್ಕಾರ, ರಾಜಕೀಯ ನೀತಿ ಮತ್ತು ಸಾಮಾಜಿಕ ವಾತಾವರಣವನ್ನು ಭ್ರಮೆ ಮತ್ತು ಭ್ರಷ್ಟಾಚಾರಕ್ಕೆ ಬಲಿಪಶು ಮಾಡುವುದು ಅವರ ಕಾರ್ಯಶೈಲಿಯಾಗಿದೆ. ಅಂತಹ ವಾತಾವರಣದಲ್ಲಿ ಅಸತ್ಯ, ವಿಕೃತಗಳನ್ನು, ಉತ್ಪ್ರೇಕ್ಷೆಯ ವರದಿಗಳ ಮೂಲಕ ಭಯ, ಭ್ರಮೆ ಮತ್ತು ದ್ವೇಷವನ್ನು ಸುಲಭವಾಗಿ ಹರಡಲಾಗುತ್ತದೆ. ನಮ್ಮ ಒಳಜಗಳ ಹಾಗೂ ಪರಸ್ಪರ ವಿವಾದಗಳಲ್ಲಿ ಸಿಲುಕಿ, ಅಸಮಂಜಸ ಮತ್ತು ದೌರ್ಬಲ್ಯದಿಂದ ಒಡೆದು ಹೋಗಿರುವ ಸಮಾಜವು ಅರಿವಿಲ್ಲದೆ ಸುಲಭವಾಗಿ ಎಲ್ಲೆಲ್ಲೂ ತನ್ನ ಪ್ರಾಬಲ್ಯವನ್ನು ಬಯಸುವ ಈ ವಿಧ್ವಂಸಕಾರಿ ಶಕ್ತಿಗಳಿಗೆ ಆಹಾರವಾಗುತ್ತಿದೆ. ನಮ್ಮ ಪರಂಪರೆಯಲ್ಲಿ ಈ ರೀತಿಯಾಗಿ ಯಾವುದೇ ರಾಷ್ಟ್ರದ ಜನರಲ್ಲಿ ಅಪನಂಬಿಕೆ, ದಿಗ್ಭ್ರಮೆ ಮತ್ತು ಪರಸ್ಪರ ದ್ವೇಷವನ್ನು ಉಂಟುಮಾಡುವ ಕಾರ್ಯ ಪ್ರಣಾಲಿಕೆಯನ್ನು ಮಂತ್ರ ವಿಪ್ಲವ ಎಂದು ಕರೆಯಲಾಗುತ್ತದೆ.

ದೇಶದಲ್ಲಿ ರಾಜಕೀಯ ಸ್ವಾರ್ಥದ ಕಾರಣಕ್ಕಾಗಿ ರಾಜಕೀಯ ಪ್ರತಿಸ್ಪರ್ಧಿಯನ್ನು ಸೋಲಿಸಲು ಇಂತಹ ಅನಪೇಕ್ಷಿತ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅವಿವೇಕದ ಕೆಲಸ. ಸಮಾಜವು ಈಗಾಗಲೇ ಆತ್ಮವಿಸ್ಮೃತಿಗೊಂಡು, ಅನೇಕ ಪ್ರಕಾರದ ಭೇದಗಳಿಂದ ಜರ್ಜರಿತಗೊಂಡು ಸ್ವಾರ್ಥ, ಸ್ವಹಿತಾಸಕ್ತಿ, ಅಸೂಯೆ ಮತ್ತು ದ್ವೇಷದ ಘಾತಕ ಸ್ಪರ್ಧೆಯಲ್ಲಿ ಸಿಲುಕಿಕೊಂಡಿದೆ. ಅದಕ್ಕಾಗಿಯೇ ಈ ಆಸುರೀ ಶಕ್ತಿಗಳಿಗೆ ಸಮಾಜ ಅಥವಾ ರಾಷ್ಟ್ರವನ್ನು ಒಡೆಯಲು ಬಯಸುವ ಆಂತರಿಕ ಅಥವಾ ಬಾಹ್ಯ ಶಕ್ತಿಗಳ ಬೆಂಬಲವೂ ಸಿಗುತ್ತದೆ.

ಮಣಿಪುರದ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಈ ವಿಷಯ ನೆನಪಿಗೆ ಬರುತ್ತದೆ. ಸುಮಾರು ಒಂದು ದಶಕದಿಂದ ಶಾಂತಿಯುತವಾಗಿದ್ದ ಮಣಿಪುರದಲ್ಲಿ ಈ ಪರಸ್ಪರ ವೈಷಮ್ಯ ಏಕಾಏಕಿ ಹೇಗೆ ಭುಗಿಲೆದ್ದಿತು? ಹಿಂಸಾಚಾರ ನಡೆಸಿದವರಲ್ಲಿ ಗಡಿಯಾಚೆಗಿನ ಉಗ್ರರೂ ಇದ್ದಾರೆಯೇ? ತಮ್ಮ ಅಸ್ತಿತ್ವದ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದ ಮಣಿಪುರಿ ಮೈತೇಯಿ ಸಮುದಾಯ ಮತ್ತು ಕುಕಿ ಸಮುದಾಯದ ನಡುವಿನ ಈ ಪರಸ್ಪರ ಸಂಘರ್ಷಕ್ಕೆ ಕೋಮು ಸ್ವರೂಪವನ್ನು ನೀಡುವ ಪ್ರಯತ್ನ ಏಕೆ ಮತ್ತು ಯಾರಿಂದ ನಡೆಯಿತು? ವರ್ಷಾನುಗಟ್ಟಲೆ ಎಲ್ಲರಿಗೂ ಸಮಾನ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವ ಸಂಘದಂತಹ ಸಂಸ್ಥೆಯನ್ನು ವಿನಾಕಾರಣ ಇದಕ್ಕೆ ಎಳೆದು ತರುವ ಪಟ್ಟಭದ್ರ ಹಿತಾಸಕ್ತಿ ಯಾರಿಗಿದೆ? ಈ ಗಡಿ ಪ್ರದೇಶದಲ್ಲಿ ನಾಗಾಭೂಮಿ ಮತ್ತು ಮಿಜೋರಾಂ ನಡುವೆ ಇರುವ ಮಣಿಪುರದಲ್ಲಿ ಇಂತಹ ಅಶಾಂತಿ ಮತ್ತು ಅಸ್ಥಿರತೆಯ ಲಾಭ ಪಡೆಯಲು ಯಾವ ವಿದೇಶಿ ಶಕ್ತಿಗಳು ಆಸಕ್ತಿ ಹೊಂದಿರಬಹುದು? ಪರಂಪರಾಗತ ಆಗ್ನೇಯ ಏಷ್ಯಾದ ಭೌಗೋಳಿಕ ರಾಜಕೀಯವು ಈ ಘಟನೆಗಳಲ್ಲಿ ಯಾವುದೇ ಪಾತ್ರವನ್ನು ಹೊಂದಿದೆಯೇ? ದೇಶದಲ್ಲಿ ಬಲಿಷ್ಠ ಸರಕಾರವಿದ್ದರೂ ಯಾರ ಬಲದ ಮೇಲೆ ಇಷ್ಟು ದಿನ ಈ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದೆ? ಕಳೆದ 9 ವರ್ಷಗಳಿಂದ ನಡೆಯುತ್ತಿದ್ದ ಶಾಂತಿಯನ್ನು ಕಾಪಾಡುವ ರಾಜ್ಯ ಸರಕಾರವಿದ್ದರೂ ಈ ಹಿಂಸಾಚಾರ ಭುಗಿಲೆದ್ದಿದ್ದು ಮತ್ತು ಮುಂದುವರಿದದ್ದು ಏಕೆ? ಇಂದಿನ ಪರಿಸ್ಥಿತಿಯಲ್ಲಿ ಸಂಘರ್ಷದಲ್ಲಿ ತೊಡಗಿದ್ದ ಎರಡೂ ಕಡೆಯ ಜನರು ಶಾಂತಿಯನ್ನು ಬಯಸುತ್ತಿರುವಾಗ, ಆ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಹೆಜ್ಜೆ ಇಡುತ್ತಿರುವುದನ್ನು ಕಂಡ ತಕ್ಷಣ ಷಡ್ಯಂತ್ರ ರಚಿಸುವ ಮೂಲಕ ಮತ್ತೆ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಶಕ್ತಿಗಳು ಯಾವುವು? ಈ ಸಮಸ್ಯೆಯ ಪರಿಹಾರಕ್ಕಾಗಿ ಬಹು ಆಯಾಮದ ಪ್ರಯತ್ನಗಳ‌ ಆವಶ್ಯಕತೆಯಿರುತ್ತವೆ.  ಇದಕ್ಕಾಗಿ, ರಾಜಕೀಯ ಇಚ್ಛಾಶಕ್ತಿ, ಅದಕ್ಕನುಗುಣವಾದ ಕ್ರಿಯಾಶೀಲತೆ ಮತ್ತು ದಕ್ಷತೆ ಈ ಕಾಲದ ಅಗತ್ಯವಾಗಿದೆ. ಅದೇ ಸಮಯದಲ್ಲಿ, ದುರದೃಷ್ಟಕರ ಪರಿಸ್ಥಿತಿಗಳ ಕಾರಣ ಉಂಟಾದ ಪರಸ್ಪರ ಅಪನಂಬಿಕೆಯ ಅಂತರವನ್ನು ಕಡಿಮೆ ಮಾಡುವಲ್ಲಿ ಸಮಾಜದ ಪ್ರಬುದ್ಧ ನೇತೃತ್ವವು ವಿಶೇಷ ಪಾತ್ರವನ್ನು ವಹಿಸಬೇಕಾಗುತ್ತದೆ. ಸಂಘದ ಸ್ವಯಂಸೇವಕರು ಸಮಾಜದ ವಿವಿಧ ಸ್ತರಗಳಲ್ಲಿ ನಿರಂತರವಾಗಿ ಎಲ್ಲರ ಸೇವೆ ಮತ್ತು ಪರಿಹಾರ ಕಾರ್ಯಗಳನ್ನು ಮಾಡುವುದರ ಜೊತೆಗೆ ಸಮಾಜದ ಸಜ್ಜನಶಕ್ತಿಯ ಶಾಂತಿಗಾಗಿ ಮನವಿ ಮಾಡುತ್ತಿದ್ದಾರೆ. ಎಲ್ಲರನ್ನೂ ತಮ್ಮವರೇ ಎಂದು ಸ್ವೀಕರಿಸಿ, ಎಲ್ಲ ರೀತಿಯ ಬೆಲೆ ತೆತ್ತು ಅವರಿಗೆ ತಿಳುವಳಿಕೆ ಮೂಡಿಸುವ ಮೂಲಕ ಎಲ್ಲರನ್ನೂ ಸುರಕ್ಷಿತವಾಗಿ, ವ್ಯವಸ್ಥಿತರಾಗಿ, ಸದ್ಭಾವದಿಂದ ಪರಿಪೂರ್ಣರಾಗಿ‌, ಸೌಹಾರ್ದತೆಯಿಂದ, ಶಾಂತಿಯುತವಾಗಿ ಇರಿಸುವುದಕ್ಕಾಗಿಯೇ ಸಂಘದ ಪ್ರಯತ್ನ‌ ಮಾಡುತ್ತಿದೆ. ಈ ಭಯಾನಕ ಮತ್ತು ಉದ್ವಿಗ್ನಕಾರಿ ಪರಿಸ್ಥಿತಿಯಲ್ಲಿಯೂ ತಾಳ್ಮೆಯ ಮನಸ್ಸಿನಿಂದ ಎಲ್ಲರನ್ನೂ ಸಂಭಾಳಿಸಲು ಪ್ರಯತ್ನಿಸಿದ ನಮ್ಮ ಕಾರ್ಯಕರ್ತರ ಪ್ರಯತ್ನದ ಕುರಿತು ಮತ್ತು ಆ ಸ್ವಯಂಸೇವಕರ ಕುರಿತು ನಮಗೆ ಹೆಮ್ಮೆ ಇದೆ.

ಈ ಮಂತ್ರ ವಿಪ್ಲವಕ್ಕೆ ಸರಿಯಾದ ಉತ್ತರವು ಸಮಾಜದ ಒಗ್ಗಟ್ಟಿನಿಂದ ಮಾತ್ರವೇ ಸಿಗಬೇಕಿದೆ. ಪ್ರತಿಯೊಂದು ಸಂದರ್ಭದಲ್ಲೂ ಈ ಏಕತೆಯ ಭಾವವು ಸಮಾಜದ ವಿವೇಕವನ್ನು  ಎಚ್ಚರವಾಗಿರಿಸುವ ವಿಷಯವಾಗಿದೆ. ಸಂವಿಧಾನದಲ್ಲೂ ಈ ಭಾವನಾತ್ಮಕ ಏಕತೆಯ ಪ್ರಾಪ್ತಿ ಒಂದು ಮಾರ್ಗದರ್ಶಿ ಸೂತ್ರದ ರೂಪದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಂದು ದೇಶದಲ್ಲಿಯೂ ಈ ಏಕತೆಯ ಭಾವನೆಯನ್ನು ಮೂಡಿಸುವ ವಾತಾವರಣ ಮತ್ತು ತಳಮಟ್ಟದ ವಿಷಯಗಳು ಬೇರೆ ಬೇರೆ ಇರುತ್ತದೆ. ಕೆಲವೆಡೆ ಆ ದೇಶದ ಭಾಷೆ, ಕೆಲವೆಡೆ ಆ ದೇಶದ ನಿವಾಸಿಗಳ ಸಮಾನ ಪೂಜಾಪದ್ಧತಿ ಅಥವಾ ನಂಬಿಕೆ, ಕೆಲವೆಡೆ ಎಲ್ಲರ ಸಾಮಾನ್ಯ ವ್ಯಾಪಾರೀ ಮಾನಸಿಕತೆಯ ಸ್ವಾರ್ಥ, ಕೆಲವೆಡೆ ಪ್ರಬಲ ಕೇಂದ್ರೀಯ ಶಕ್ತಿಯ‌ ಆಡಳಿತ‌ ವ್ಯವಸ್ಥೆ ದೇಶದ ಜನರನ್ನು ಒಂದೇ ಸೂತ್ರದಲ್ಲಿ ಜೋಡಿಸಿಡುತ್ತದೆ. ಆದರೆ ಮಾನವ ನಿರ್ಮಿತ ಕೃತಕ ನೆಲೆಗಳ ಆಧಾರದ ಮೇಲೆ ಅಥವಾ ಸಮಾನ ಸ್ವಾರ್ಥದ ಆಧಾರದ ಮೇಲೆ ನಿರ್ಮಿಸಲಾದ ಏಕತೆಯು ಬಾಳಿಕೆ ಬರುವುದಿಲ್ಲ. ನಮ್ಮ ದೇಶದಲ್ಲಿ ಎಷ್ಟು ವಿವಿಧತೆಗಳಿವೆ ಎಂದರೆ ಈ ದೇಶವು, ಒಂದು ದೇಶವಾಗಿ ಅಸ್ತಿತ್ವವನ್ನು ಹೊಂದಿದೆ ಎಂದು ಜನರು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ನಮ್ಮ ಈ ದೇಶವು, ಒಂದು ರಾಷ್ವ್ರವಾಗಿ, ಸಮಾಜವಾಗಿ, ವಿಶ್ವ ಇತಿಹಾಸದ ಎಲ್ಲಾ ಏಳುಬೀಳುಗಳನ್ನು ದಾಟಿ, ತನ್ನ ಗತಕಾಲದ ಎಳೆಗಳೊಂದಿಗೆ ಅವಿಚ್ಛಿನ್ನವಾದ ಸಂಬಂಧವನ್ನು ಉಳಿಸಿಕೊಂಡು ಇಂದಿಗೂ ಜೀವಂತವಾಗಿ ನಿಂತಿದೆ.

“ಯುನಾನ್ ಮಿಸ್ರ್ ರೋಮಾ ಸಬ್ ಮಿಟ್ ಗಯೇ ಜಹಾನ್ ಸೆ,

ಅಬ್ ತಕ್ ಮಗರ್ ಹೈ ಬಾಕಿ ನಾಮೋ ನಿಶಾನ್ ಹಮಾರಾ,

ಕುಚ್ ಬಾತ್ ಹೈ ಕಿ ಹಸ್ತಿ ಮಿಟತಿ ನಹಿಂ ಹಮಾರಿ,

ಸದಿಯೋಂ ರಹಾ ಹೈ ದುಷ್ಮನ್ ದೌರೇ ಜಹಾ ಹಮಾರಾ”

ಭಾರತದಿಂದ ಹೊರಗಿರುವ ಜನರ ಬುದ್ಧಿ ಬೆರಗಾಗಬಹುದು, ಆದರೆ ಮನಸ್ಸು ಆಕರ್ಷಿತವಾಗುವಂತಹ ಏಕತೆಯ ಸಂಪ್ರದಾಯವನ್ನು ನಾವು ಪರಂಪರೆಯಿಂದ ಪಡೆದುಕೊಂಡಿದ್ದೇವೆ. ಅದರ ರಹಸ್ಯವೇನು? ನಿಸ್ಸಂದೇಹವಾಗಿ ಅದು ನಮ್ಮ ಸರ್ವ ಸಮಾವೇಶಕ ಸಂಸ್ಕೃತಿಯಾಗಿದೆ. ಪೂಜಾಪದ್ಧತಿ, ಪರಂಪರೆ, ಭಾಷೆ, ಪ್ರಾಂತ (ಪ್ರದೇಶ), ಜಾತಿಗಳು ಇತ್ಯಾದಿಗಳ ಭೇದಗಳನ್ನು ಮೀರಿ, ತನ್ನ ಕುಟುಂಬದಿಂದ ಇಡೀ ವಿಶ್ವ ಕುಟುಂಬಕ್ಕೆ ನಮ್ಮ ಆತ್ಮೀಯತೆಯನ್ನು ವಿಸ್ತರಿಸುವ ನಮ್ಮ ಆಚರಣೆ ಮತ್ತು ಜೀವನ ನಡೆಸುವ ರೀತಿಗಳಾಗಿವೆ. ನಮ್ಮ ಪೂರ್ವಜರು ಅಸ್ತಿತ್ವದ ಏಕತೆಯ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡರು. ಇದರ ಫಲ ಸ್ವರೂಪವಾಗಿ ಶರೀರ, ಮನಸ್ಸು ಮತ್ತು ಬುದ್ಧಿಗಳ ಏಕಕಾಲದ ಉನ್ನತಿಯೊಂದಿಗೆ, ಮೂರಕ್ಕೂ ಆನಂದವನ್ನು ನೀಡುವ, ಅರ್ಥ ಮತ್ತು ಕಾಮವನ್ನು ಜೊತೆಗೂಡಿಸಿ ಮೋಕ್ಷದ ಕಡೆಗೆ ಕೊಂಡೊಯ್ಯಲು ಕಾರಣವಾಗುವ ಧರ್ಮತತ್ವವನ್ನು ಅರಿತುಕೊಂಡರು. ಆ ಪ್ರತೀತಿಯ ಆಧಾರದ ಮೇಲೆ, ಅವರು ಧರ್ಮತತ್ತ್ವದ ನಾಲ್ಕು ಶಾಶ್ವತ ಮೌಲ್ಯಗಳನ್ನು (ಸತ್ಯ, ಕರುಣೆ, ಪಾವಿತ್ರ್ಯತೆ ಮತ್ತು ತಪಸ್ಸು) ಅನುಷ್ಠಾನಗೊಳಿಸುವ ಸಂಸ್ಕೃತಿಯನ್ನು ವಿಕಾಸಗೊಳಿಸಿದರು. ನಾಲ್ಕೂ ಕಡೆಯಿಂದ ಸುರಕ್ಷಿತವಾಗಿರುವ ಮತ್ತು ಸಮೃದ್ಧವಾಗಿರುವ ನಮ್ಮ ಮಾತೃಭೂಮಿಯ ಆಹಾರ, ನೀರು ಮತ್ತು ಗಾಳಿಯಿಂದ ಮಾತ್ರ ಇದು ಸಾಧ್ಯವಾಯಿತು. ಆದ್ದರಿಂದ, ನಾವು ನಮ್ಮ ಭಾರತ ಭೂಮಿಯನ್ನು ನಮ್ಮ ಮೌಲ್ಯಗಳ ಅಧಿಷ್ಠಾತ್ರಿ ಮಾತೆ ಎಂದು ಪರಿಗಣಿಸಿ ಭಕ್ತಿಯಿಂದ ಆರಾಧಿಸುತ್ತೇವೆ. ಅದಕ್ಕಾಗಿಯೇ ಇತ್ತೀಚೆಗೆ ನಮ್ಮ ಸ್ವಾತಂತ್ರ‍್ಯದ 75ನೇ ವರ್ಷದ ಸಂದರ್ಭದಲ್ಲಿ ಸ್ವಾತಂತ್ರ‍್ಯ ಹೋರಾಟದ ನಮ್ಮ ಮಹನೀಯರನ್ನು ಸ್ಮರಿಸಿದ್ದೇವೆ. ನಮ್ಮ ಧರ್ಮ, ಸಂಸ್ಕೃತಿ, ಸಮಾಜ‌ ಮತ್ತು ದೇಶವನ್ನು ರಕ್ಷಿಸಿ, ಕಾಲಕಾಲಕ್ಕೆ ಅವಶ್ಯವಾದ ಸುಧಾರಣೆಗಳನ್ನು ಮಾಡುವುದು ಹಾಗೂ ಅವುಗಳ ವೈಭವದ ಸಂವರ್ಧನೆಯು ಯಾವ ಮಹಾಪುರುಷರ ಕಾರಣದಿಂದಾಗಿದೆಯೋ, ಆ ಕರ್ತೃತ್ವ ಸಂಪನ್ನ ಪೂರ್ವಜರು, ನಮ್ಮೆಲ್ಲರಿಗೂ ಆದರ್ಶಪ್ರಾಯರು ಹಾಗೂ ಅನುಕರಣೀಯರು. ನಮ್ಮ ದೇಶದಲ್ಲಿ ಪ್ರಸ್ತುತ ಪ್ರಚಲಿತದಲ್ಲಿರುವ ಎಲ್ಲಾ ಭಾಷೆ, ಪ್ರದೇಶ, ಪಂಥ, ಸಂಪ್ರದಾಯ, ಜಾತಿ, ಉಪಜಾತಿ ಇತ್ಯಾದಿ ಎಲ್ಲಾ ವಿವಿಧತೆಗಳನ್ನು ಒಂದು ಸೂತ್ರದಲ್ಲಿ ಒಟ್ಟಿಗೆ ಜೋಡಿಸಿ ಒಂದು ರಾಷ್ಟ್ರವಾಗಿ ಎದ್ದುನಿಲ್ಲುವಂತೆ ಮಾಡಲು ಈ ಮೂರು ತತ್ತ್ವಗಳು –  ಮಾತೃಭೂಮಿಯ ಮೇಲಿನ ಭಕ್ತಿ, ಪೂರ್ವಜರ ಬಗ್ಗೆ ಗೌರವ ಮತ್ತು ಸರ್ವರದ್ದೂ ಸಮಾನ ಸಂಸ್ಕೃತಿ; ಇವು ನಮ್ಮ ಏಕತೆಯ ಅಖಂಡವಾದ ಸೂತ್ರವಾಗಿದೆ.

ಸಮಾಜದ ಶಾಶ್ವತ ಏಕತೆಯು ಪರಸ್ಪರ ಬಂಧುತ್ವದಿಂದ ಬರುತ್ತದೆ, ಸ್ವಾರ್ಥದ ಮಾರ್ಗಗಳಿಂದಲ್ಲ. ನಮ್ಮ ಸಮಾಜ ಬಹಳ ದೊಡ್ಡದು. ಬಹಳ ವಿವಿಧತೆಯಿಂದ ತುಂಬಿದೆ. ಕಾಲಾನಂತರದಲ್ಲಿ, ವಿದೇಶದಿಂದ ಕೆಲವು ಆಕ್ರಮಣಕಾರಿ ಸಂಪ್ರದಾಯಗಳು ನಮ್ಮ ದೇಶವನ್ನು ಪ್ರವೇಶಿಸಿದವು, ಆದರೂ ನಮ್ಮ ಸಮಾಜವು ಈ ಮೂರು ವಿಷಯಗಳ ಆಧಾರದ ಮೇಲೆ ಒಂದು ಸಮಾಜವಾಗಿ ಉಳಿದು ನಿಂತಿದೆ. ಆದ್ದರಿಂದ, ನಾವು ಏಕತೆಯ ಬಗ್ಗೆ ಮಾತನಾಡುವಾಗ, ಈ ಏಕತೆಯನ್ನು ಯಾವುದೇ ಕೊಡು-ಕೊಳ್ಳುವಿಕೆಯಿಂದ ಸಾಧಿಸಲಾಗುವುದಿಲ್ಲ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಬಲವಂತವಾಗಿ ಸಾಧಿಸಲು ಹೊರಟರೆ ಮತ್ತೆ ಮತ್ತೆ ಕೆಡುತ್ತದೆ. ಇಂದಿನ ವಾತಾವರಣದಲ್ಲಿ ಸಮಾಜದಲ್ಲಿ ಕಲಹ ಹರಡಲು ನಡೆಯುತ್ತಿರುವ ಪ್ರಯತ್ನಗಳನ್ನು ಕಂಡು ಸಹಜವಾಗಿಯೇ ಹಲವರು ಚಿಂತಿತರಾಗಿದ್ದಾರೆ ಮತ್ತು ಅಂತಹವರು ಸಿಗುತ್ತಿರುತ್ತಾರೆ. ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವ ಸಜ್ಜನರನ್ನು ಕೂಡ ನಾವು ಕಾಣುತ್ತೇವೆ, ಅವರ ಪೂಜೆಯಿಂದಾಗಿ ಮುಸಲ್ಮಾನ ಅಥವಾ ಕ್ರಿಶ್ಚಿಯನ್ ಎಂದು ಕರೆಯಲ್ಪಡುವ ಜನರು ಸಹ ಕಂಡುಬರುತ್ತಾರೆ. ಅವರು‌ ಹೇಳುವುದೇನೆಂದರೆ ಫಿತ್ನಾ (ಅಪಶ್ರುತಿ), ಫಸಾದ್ (ಕಲಹ)ಹಾಗೂ ಕಿತಾನ್ (ಹಿಂಸೆ) ಇವುಗಳನ್ನು ಬಿಟ್ಟು ಸುಲಾಹ್ (ಸಮನ್ವಯ), ಸಲಾಮತಿ (ಸುರಕ್ಷತೆ) ಮತ್ತು ಅಮನ್ (ಶಾಂತಿ) ಇವುಗಳನ್ನು ಅನುಸರಿಸುವುದೇ ಶ್ರೇಷ್ಠ ಎನ್ನುತ್ತಾರೆ.  ಈ ಚರ್ಚೆಗಳಲ್ಲಿ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ಕಾಕತಾಳೀಯವಾಗಿ ಒಂದು ನೆಲದಲ್ಲಿ ವಿಭಿನ್ನ ಸಮುದಾಯಗಳು ಆಕಸ್ಮಿಕವಾಗಿ ಒಂದಾಗುವ ಮಾತಲ್ಲ ಇದು. ನಾವು ಸಮಾನ ಪೂರ್ವಜರ ವಂಶಸ್ಥರು, ಒಂದೇ ಮಾತೃಭೂಮಿಯ ಮಕ್ಕಳು, ಒಂದು ಸಂಸ್ಕೃತಿಯ ವಾರಸುದಾರರು, ನಮ್ಮ ಪರಸ್ಪರ ಏಕತೆಯನ್ನು ಮರೆತಿದ್ದೇವೆ. ನಾವು ನಮ್ಮ ಆ ಮೂಲ ಏಕತೆಯನ್ನು ಅರ್ಥಮಾಡಿಕೊಂಡು ಅದರ ಆಧಾರದಲ್ಲಿ ಮತ್ತೆ ಒಂದಾಗಬೇಕು.

ನಮಗೆ ಪರಸ್ಪರ ಯಾವುದೇ ಸಮಸ್ಯೆಗಳಿಲ್ಲವೇ? ನಮಗೆ ನಮ್ಮ ವಿಕಾಸಕ್ಕಾಗಿ ಯಾವುದೇ ಅವಶ್ಯಕತೆಗಳು ಮತ್ತು ಅಪೇಕ್ಷೆಗಳಿಲ್ಲವೇ? ಅಭಿವೃದ್ಧಿ ಸಾಧಿಸಲು ನಾವು ನಮ್ಮ ನಡುವೆಯೇ ಪೈಪೋಟಿ ನಡೆಸುವುದಿಲ್ಲವೇ? ನಾವೆಲ್ಲರೂ ಮನಸ್ಸು, ಮಾತು ಮತ್ತು ಕ್ರಿಯೆಗಳಲ್ಲಿ ಏಕತೆಯ ಈ ತತ್ವಗಳನ್ನು ಅನುಸರಿಸುವ ಮೂಲಕ ವ್ಯವಹರಿಸುತ್ತೇವೆಯೇ? ಎಲ್ಲರಿಗೂ ತಿಳಿದಿದೆ ಎಲ್ಲರೂ ಹೀಗಲ್ಲ ಎಂದು. ಆದರೆ ಹೀಗೆ ಆಗಲಿ ಎಂದು ಬಯಸುವವರು ಮೊದಲು ಸಮಸ್ಯೆಗಳು ಕೊನೆಗೊಳ್ಳಬೇಕು, ಮೊದಲು ಪ್ರಶ್ನೆಗಳನ್ನು ಪರಿಹರಿಸಬೇಕು ನಂತರ ನಾವು ಏಕತೆಯ ವಿಷಯಗಳ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದರೆ ಸರಿಯಾಗುವುದಿಲ್ಲ. ಆತ್ಮೀಯತೆಯ ದೃಷ್ಟಿಯನ್ನು ಅಳವಡಿಸಿಕೊಂಡು ನಮ್ಮ ವ್ಯವಹಾರಗಳನ್ನು ಪ್ರಾರಂಭಿಸುವುದರಿಂದ ಸಮಸ್ಯೆಗಳಿಗೆ ಪರಿಹಾರವೂ ಅದರಿಂದ ಹೊರಹೊಮ್ಮುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಅಲ್ಲೊಂದು ಇಲ್ಲೊಂದು ನಡೆಯುತ್ತಿರುವ ಘಟನೆಗಳಿಂದ ವಿಚಲಿತರಾಗದೆ ಶಾಂತಿ ಸಂಯಮದಿಂದ ಕೆಲಸ ಮಾಡಬೇಕು. ಸಮಸ್ಯೆಗಳಿವೆ ನಿಜ ಆದರೆ ಅವು ಕೇವಲ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ. ಅವರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದ ಜೊತೆಗೆ, ನಾವು ಅನ್ಯೋನ್ಯತೆ ಮತ್ತು ಏಕತೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸಂತ್ರಸ್ತ ಮನೋಭಾವ (Victimhood), ಒಬ್ಬರು ಇನ್ನೊಬ್ಬರನ್ನು ಅವಿಶ್ವಾಸದ ದೃಷ್ಟಿಯಿಂದ ನೋಡುವ ಅಥವಾ ರಾಜಕೀಯ ಪ್ರಭಾವದ ತೊಡಕುಗಳನ್ನು ಪಕ್ಕಕ್ಕಿರಿಸಿ ಮುನ್ನಡೆಯಬೇಕಿದೆ. ಇಂತಹ ಕೆಲಸಗಳಿಗೆ ರಾಜಕೀಯವೇ ಅಡ್ಡಿಯಾಗುತ್ತದೆ. ಇದು ಯಾವುದೇ ಶರಣಾಗತಿ ಅಥವಾ ಬಲವಂತದ ರೂಪವಲ್ಲ. ಕಾದಾಡುತ್ತಿರುವ ಎರಡು ಪಕ್ಷಗಳ ನಡುವೆ ಕದನ ವಿರಾಮವೂ ಅಲ್ಲ. ಇದು ಭಾರತದ ಎಲ್ಲಾ ವಿವಿಧತೆಗಳಲ್ಲಿ ಇರುವ ಪರಸ್ಪರ ಏಕತೆಯ ಎಳೆಗಳನ್ನು ಒಗ್ಗೂಡಿಸುವ ಕರೆಯಾಗಿದೆ. ನಮ್ಮ ಸ್ವತಂತ್ರ ಭಾರತದ ಸಂವಿಧಾನದ 75ನೇ ವರ್ಷವೂ ನಡೆಯುತ್ತಿದೆ. ಆ ಸಂವಿಧಾನ ನಮಗೆ ಈ ದಿಕ್ಕನ್ನು ತೋರಿಸುತ್ತದೆ. ಪೂಜ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡುವಾಗ ಸಂವಿಧಾನ ಸಭೆಯಲ್ಲಿ ಮಾಡಿದ ಎರಡು ಭಾಷಣಗಳನ್ನು ಗಮನಿಸಿದರೆ ಇದರ ಸಾರವನ್ನು ಅರ್ಥಮಾಡಿಕೊಳ್ಳಬಹುದು.

ಇದು ಏಕಾಏಕಿ ಆಗುವ ಕೆಲಸವಲ್ಲ. ಹಳೆಯ ಸಂಘರ್ಷಗಳ ಕಹಿ ನೆನಪುಗಳು ಸಾಮೂಹಿಕ ಮನಸ್ಸಿನಲ್ಲಿ ಇನ್ನೂ ಉಳಿದಿವೆ. ವಿಭಜನೆಯ ವೇಳೆಯ ಭಯೋತ್ಪಾದನೆಯ  ಭೀಕರ ಗಾಯವು ತುಂಬಾ ಆಳವಾಗಿದೆ. ಅದರ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಂದ ಮನಸ್ಸಿನಲ್ಲಿ ಉಂಟಾಗುವ ಕ್ಷೋಭೆಯು,‌ ಪೈಪೋಟಿ ತುಂಬಿದ ಮಾತುಗಳಲ್ಲಿ ಮತ್ತು ನಡವಳಿಕೆಯಲ್ಲಿ ಪ್ರಕಟವಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ ಬಸ್ತಿಗಳಲ್ಲಿ ಮನೆ ಸಿಗದಿರುವುದರಿಂದ ಹಿಡಿದು ಒಬ್ಬರು ಇನ್ನೊಬ್ಬರ ಕುರಿತು ಮೇಲು ಕೀಳು ಎಂಬ ತಿರಸ್ಕಾರದ ವ್ಯವಹಾರ ಆಗುವವರೆಗೂ ಕಹಿ ಅನುಭವಗಳಿವೆ. ಹಿಂಸಾಚಾರ, ಗಲಭೆ, ಚಿತ್ರಹಿಂಸೆ ಮುಂತಾದ ಘಟನೆಗಳಿಗೆ ಒಬ್ಬರನ್ನೊಬ್ಬರು ಪರಸ್ಪರ ದೂಷಿಸುವ ಘಟನೆಗಳೂ ನಡೆಯುತ್ತವೆ. ಕೆಲವರ ನಡೆಗಳು ಇಡೀ ಸಮಾಜದ ನಡೆಗಳು ಎಂದುಕೊಂಡು ಮಾತು, ವಿಚಾರಗಳನ್ನು ಬಿಟ್ಟು ಹೋಗುವವರಿದ್ದಾರೆ. ಆಹ್ವಾನ ಮತ್ತು ಪ್ರತಿ-ಆಹ್ವಾನಗಳನ್ನು ನೀಡಲಾಗುತ್ತದೆ, ಇದು ಪ್ರಚೋದನೆಯ ಕಾರ್ಯನಿರ್ವಹಿಸುತ್ತದೆ.

ನಮ್ಮನ್ನು ಪರಸ್ಪರ ಹೋರಾಡುವಂತೆ ಮಾಡಿ ದೇಶ ಒಡೆಯಲು ಬಯಸುವ ಶಕ್ತಿಗಳು ಇದರ ಸಂಪೂರ್ಣ ಲಾಭವನ್ನೂ ಪಡೆಯುತ್ತವೆ. ನೋಡು ನೋಡುತ್ತಿದಂತೆ ಒಂದು ಸಣ್ಣ ಘಟನೆಯನ್ನೂ ದೊಡ್ಡ ರೂಪ ನೀಡಿ ಪ್ರಚಾರಗೊಳಿಸಲಾಗುತ್ತದೆ. ದೇಶ ಮತ್ತು ವಿದೇಶಗಳಿಂದ ಕಳವಳ ಮತ್ತು ಎಚ್ಚರಿಕೆಯನ್ನು ವ್ಯಕ್ತಪಡಿಸುವ ಹೇಳಿಕೆಗಳನ್ನು ನೀಡಲಾಗುತ್ತದೆ. ಹಿಂಸಾಚಾರವನ್ನು ಪ್ರಚೋದಿಸುವ “ಟೂಲ್ ಕಿಟ್‌ಗಳು” ಸಕ್ರಿಯವಾಗುತ್ತವೆ ಮತ್ತು ಪರಸ್ಪರ ಅಪನಂಬಿಕೆ ಮತ್ತು ದ್ವೇಷವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ.

ಸಮಾಜದಲ್ಲಿ ಸಾಮರಸ್ಯ ಬಯಸುವವರೆಲ್ಲ ಈ ಘಾತುಕ ಆಟಗಳ ಮಾಯೆಯಿಂದ ಪಾರಾಗಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವು ಕ್ರಮೇಣವಾಗಿ ಹೊರಹೊಮ್ಮುತ್ತದೆ. ಅದಕ್ಕಾಗಿ, ದೇಶದಲ್ಲಿ ವಿಶ್ವಾಸ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವುದು ಪೂರ್ವಾಪೇಕ್ಷಿತವಾಗಿದೆ. ನಮ್ಮ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ನಂಬಿಕೆಯಿಂದ ಪರಸ್ಪರ ಸಂವಹನವನ್ನು ಹೆಚ್ಚಿಸಬೇಕು, ಪರಸ್ಪರ ತಿಳುವಳಿಕೆ ಹೆಚ್ಚಾಗಬೇಕು, ಪರಸ್ಪರ ನಂಬಿಕೆ- ಗೌರವ ಮೂಡಬೇಕು, ಎಲ್ಲರಲ್ಲೂ ಸೌಹಾರ್ದತೆ, ತಾಳಮೇಳ ಹೆಚ್ಚಬೇಕು. ಹೀಗೆ ಮನಸ್ಸು, ಮಾತು, ನಡತೆಯನ್ನು ಇಟ್ಟುಕೊಂಡು ಮುಂದುವರೆಯಬೇಕು. ಪ್ರಚಾರ ಅಥವಾ ಊಹೆಗಳೊಂದಿಗೆ ಅಲ್ಲ ನಾವು ವಸ್ತುಸ್ಥಿತಿಯೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಧೈರ್ಯಪೂರ್ವಕ, ಸಂಯಮ ಮತ್ತು ಸಹನಶೀಲತೆಯೊಂದಿಗೆ, ತಮ್ಮ ಮಾತು ಮತ್ತು ಕಾರ್ಯಗಳಲ್ಲಿ ಉಗ್ರವಾದ, ಕೋಪ ಮತ್ತು ಭಯವನ್ನು ಬದಿಗಿಟ್ಟು, ದೃಢತಾಪೂರ್ವಕವಾಗಿ ಸಂಕಲ್ಪಬದ್ಧವಾಗಿ, ದೀರ್ಘಕಾಲದವರೆಗೂ ಸತತ ಪ್ರಯತ್ನಗಳನ್ನು ಮುಂದುವರಿಸುವುದು ಅತ್ಯಗತ್ಯ. ಶುದ್ಧ ಹೃದಯದಿಂದ ಮಾಡಿದ ಒಳ್ಳೆಯ ಸಂಕಲ್ಪಗಳು ಮಾತ್ರ ಪೂರ್ಣಗೊಳ್ಳುತ್ತವೆ.

ಯಾವುದೇ ಸಂದರ್ಭದಲ್ಲೂ, ಎಷ್ಟೇ ಪ್ರಚೋದನೆ ಇದ್ದರೂ, ಕಾನೂನು ಸುವ್ಯವಸ್ಥೆ, ನಾಗರಿಕ ಅನುಶಾಸನ‌ ಹಾಗೂ ಸಂವಿಧಾನ ಪಾಲಿಸುವುದು ಕಡ್ಡಾಯ. ಸ್ವತಂತ್ರ ದೇಶದಲ್ಲಿ ಈ ನಡವಳಿಕೆಯನ್ನು ದೇಶಭಕ್ತಿಯ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಮಾಧ್ಯಮಗಳನ್ನು ಬಳಸಿಕೊಂಡು ಮಾಡುವ ಪ್ರಚೋದನಕಾರಿ ಅಪಪ್ರಚಾರ ಮತ್ತು ಅದರ ಫಲಸ್ವರೂಪವಾಗಿ ಹುಟ್ಟಿಕೊಳ್ಳುವ ಆರೋಪ-ಪ್ರತ್ಯಾರೋಪಗಳ ಪೈಪೋಟಿಯಲ್ಲಿ ಸಿಲುಕಿಕೊಳ್ಳಬೇಡಿ; ಸಮಾಜದಲ್ಲಿ ಸತ್ಯ ಮತ್ತು ಆತ್ಮೀಯತೆಯನ್ನು ಹರಡಲು ಮಾಧ್ಯಮಗಳನ್ನು ಬಳಸಬೇಕು. ಹಿಂಸೆ ಮತ್ತು ಗೂಂಡಾಗಿರಿಗೆ ಸಂಘಟಿತ ಬೆಲೆ ಸಂಪನ್ನತೆ ಹೊಂದಿರುವ ಸಮಾಜದ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸುವಲ್ಲಿ ಉಪಕ್ರಮವನ್ನು ತೆಗೆದುಕೊಳ್ಳಲು ಸರ್ಕಾರ ಮತ್ತು ಆಡಳಿತಕ್ಕೆ ಸರಿಯಾದ ಬೆಂಬಲವನ್ನು ನೀಡುವುದೇ ಪರಿಹಾರವಾಗಿದೆ.

ಮುಂಬರುವ 2024ರ ಆರಂಭದ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಆಮಿಷಗಳನ್ನು ಒಡ್ಡಿ ಭಾವನೆಗಳನ್ನು ಪ್ರಚೋದಿಸುವ ಮೂಲಕ ಮತಗಳನ್ನು ಕೊಯ್ಲು ಮಾಡುವ ಪ್ರಯತ್ನಗಳನ್ನು ಅಪೇಕ್ಷಿಸಲಾಗುವುದಿಲ್ಲ, ಆದರೆ ಅವು ನಡೆಯುತ್ತಲೇ ಇರುತ್ತವೆ. ಸಮಾಜವನ್ನು ವಿಭಜಿಸುವ ಇಂತಹ ಸಂಗತಿಗಳಿಂದ ನಾವು ದೂರವಿರಬೇಕಿದೆ. ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದನ್ನು ಅವಶ್ಯವಾಗಿ ನಿರ್ವಹಿಸಬೇಕು. ದೇಶದ ಏಕತೆ, ಸಮಗ್ರತೆ, ಅಸ್ಮಿತೆ ಮತ್ತು ಅಭಿವೃದ್ಧಿಯ ವಿಷಯಗಳನ್ನು ಪರಿಗಣಿಸಿ ನಿಮ್ಮ ಮತ ಚಲಾಯಿಸಿ.

2025ರಿಂದ 2026ರ ವರ್ಷವು ಸಂಘ 100 ವರ್ಷಗಳನ್ನು ಪೂರ್ಣಗೊಳಿಸಿದ ನಂತರದ ವರ್ಷವಾಗಿದೆ. ಸಂಘದ ಸ್ವಯಂಸೇವಕರು ಮೇಲೆ ಹೇಳಿದ ಎಲ್ಲ ವಿಷಯಗಳಲ್ಲೂ ಮುಂದೆ ಹೆಜ್ಜೆ ಇಡುತ್ತಾರೆ, ಅದಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಸಮಾಜದ ನಡವಳಿಕೆ ಮತ್ತು ಮಾತಿನಲ್ಲಿ ಇಡೀ ಸಮಾಜ ಮತ್ತು ದೇಶಕ್ಕೆ ಸಂಬಂಧಿಸಿದ ಆತ್ಮೀಯ ಭಾವನೆ ವ್ಯಕ್ತವಾಗಬೇಕು. ದೇವಸ್ಥಾನ, ನೀರು, ಸ್ಮಶಾನದಲ್ಲಿ ಯಾವುದೇ ಭೇದಭಾವ ಇನ್ನೂ ಉಳಿದಿದ್ದರೆ ಅದು ಕೊನೆಗೊಳ್ಳಬೇಕು. ಕುಟುಂಬದ ಎಲ್ಲ ಸದಸ್ಯರಲ್ಲಿ ದಿನನಿತ್ಯ ಶುಭ ಸಂವಹನ, ಸಂಸ್ಕಾರಯುತ ನಡವಳಿಕೆ ಮತ್ತು ಸಂವೇದನಾಶೀಲತೆ ಮುಂದುವರಿಯಬೇಕು, ಬೆಳೆಯುತ್ತಲೇ ಇರಬೇಕು ಮತ್ತು ಅದರ ಮೂಲಕ ಸಮಾಜದ ಸೇವೆಯೂ ಆಗುತ್ತಲಿರಲಿ. ನಿಮ್ಮ ಮನೆಯಿಂದ ನೀರನ್ನು ಉಳಿಸುವ ಮೂಲಕ, ಪ್ಲಾಸ್ಟಿಕ್ ತೊಡೆದುಹಾಕುವ ಮೂಲಕ ಮತ್ತು ನಿಮ್ಮ ಮನೆಯ ಅಂಗಳದಲ್ಲಿ ಮತ್ತು ಸುತ್ತಮುತ್ತಲಿನ ಹಸಿರನ್ನು ಹೆಚ್ಚಿಸುವ ಮೂಲಕ ಪ್ರಕೃತಿಯೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಸ್ವದೇಶಿ ನಡವಳಿಕೆಯಿಂದ ಸ್ವನಿರ್ಭರತೆ ಮತ್ತು ಸ್ವಾವಲಂಬನೆ ಹೆಚ್ಚಾಗುತ್ತದೆ. ದುಂದುವೆಚ್ಚ ನಿಲ್ಲಬೇಕು. ದೇಶದ ಉದ್ಯೋಗಾವಕಾಶ ಹೆಚ್ಚಬೇಕು ಮತ್ತು ದೇಶದ ಹಣ ದೇಶದಲ್ಲೇ ಬಳಕೆಯಾಗಬೇಕು. ಆದುದರಿಂದ ಸ್ವದೇಶಿ ಆಚರಣೆ, ನಡತೆಯೂ ಮನೆಯಿಂದಲೇ ಆರಂಭವಾಗಬೇಕು. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಪೌರತ್ವದ ನಿಯಮಗಳನ್ನು ಅನುಸರಿಸಬೇಕು ಮತ್ತು ಸಮಾಜದಲ್ಲಿ ಎಲ್ಲೆಡೆ ಪರಸ್ಪರ ಸಾಮರಸ್ಯ ಮತ್ತು ಸಹಕಾರದ ಪ್ರವೃತ್ತಿ ವ್ಯಕ್ತವಾಗಬೇಕು. ಪ್ರತಿಯೊಬ್ಬರೂ ಈ ಐದು ನಡವಳಿಕೆಯ ವಿಷಯಗಳು ಆಗಬೇಕೆಂದು ಬಯಸುತ್ತಾರೆ. ಆದರೆ ಸಣ್ಣ ವಿಷಯಗಳಿಂದ ಪ್ರಾರಂಭಿಸಿ ಮತ್ತು ಅವುಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ, ಈ ನಡವಳಿಕೆಯನ್ನು ನಮ್ಮ ಸ್ವಭಾವಕ್ಕೆ ತರಲು ನಿರಂತರ ಪ್ರಯತ್ನಗಳನ್ನು ಮಾಡುವುದು ಅವಶ್ಯಕ. ಮುಂದಿನ ದಿನಗಳಲ್ಲಿ ಸಂಘದ ಸ್ವಯಂಸೇವಕರು ಸಮಾಜದ ಕಷ್ಟದಲ್ಲಿರುವ ಅಭಾವಗ್ರಸ್ತರ ಸೇವೆ ಮಾಡುವುದರೊಂದಿಗೆ ಈ ಐದು ರೀತಿಯ ಸಮಾಜಮುಖಿ ಕಾರ್ಯಗಳನ್ನು ಸ್ವಯಂ ಮಾಡುವುದರ ಜೊತೆಗೆ ಸಮಾಜವನ್ನು ಅದರಲ್ಲಿ ಸಹಭಾಗಿ ಮತ್ತು ಸಹಕಾರಿಯಾಗಿಸಲು ಪ್ರಯತ್ನಿಸಬೇಕು. ಸಮಾಜದ ಹಿತದೃಷ್ಟಿಯಿಂದ ಸರ್ಕಾರ, ಆಡಳಿತ ಮತ್ತು ಸಮಾಜದ ಸಜ್ಜನಶಕ್ತಿಗಳು ಯಾವುದೇ ಕಾರ್ಯ ಮಾಡುತ್ತಿರಲಿ ಅಥವಾ ಮಾಡಲು ಬಯಸಿದರೂ ಅದರಲ್ಲಿ ಸಂಘದ ಸ್ವಯಂಸೇವಕರ ಕೊಡುಗೆ ನಿತ್ಯಾನುಸಾರದಂತೆ ಇರಬೇಕು.

ಸಮಾಜದ ಏಕತೆ, ಜಾಗರೂಕತೆ ಮತ್ತು ಎಲ್ಲಾ ದಿಕ್ಕುಗಳಲ್ಲಿ ನಿಸ್ವಾರ್ಥ ಉದ್ಯಮ, ಜನಹಿತಕಾರಿ ಸರ್ಕಾರ ಮತ್ತು ಜನಪರ ಆಡಳಿತವು ‘ಸ್ವ’ತ್ವದ ಅಧಿಷ್ಠಾನದ ಮೇಲೆ ನಿಂತು ಪರಸ್ಪರ ಪ್ರಯತ್ನಗಳನ್ನು ಮಾಡಿದಾಗ ಮಾತ್ರ ರಾಷ್ಟ್ರವು ಬಲಶಾಲಿ ಮತ್ತು ವೈಭವ ಸಂಪನ್ನವಾಗುತ್ತದೆ. ಬಲಶಾಲಿ ಮತ್ತು ವೈಭವಸಂಪನ್ನ ರಾಷ್ಟ್ರದಲ್ಲಿ ನಮ್ಮ ಸನಾತನ ಸಂಸ್ಕೃತಿ ಯಾವುದು ಪ್ರತಿಯೊಬ್ಬರನ್ನು ತನ್ನ ಕುಟುಂಬವೆಂದು ಪರಿಗಣಿಸುತ್ತದೆಯೋ, ಅದು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಕರೆದೊಯ್ಯುತ್ತದೆ ಮತ್ತು ನಮ್ಮನ್ನು ನಶ್ವರ ಜೀವನದಿಂದ ಸಾರ್ಥಕತೆಯ ಅಮರ ಜೀವನದೆಡೆಗೆ ಕರೆದೊಯ್ಯುವ ಸಂಸ್ಕೃತಿಯಾಗಿದೆ. ಆಗ ಅದು ರಾಷ್ಟ್ರ, ಪ್ರಪಂಚದ ಕಳೆದುಹೋದ ಸಮತೋಲನವನ್ನು ಮರಳಿ ತರುವ ಮತ್ತು ಸುಖಶಾಂತಿಮಯ ಹೊಸ ಜೀವನದ ವರವನ್ನು ಜಗತ್ತಿಗೆ ಒದಗಿಸುತ್ತದೆ. ಪ್ರಸ್ತುತ ಕಾಲದಲ್ಲಿ ನಮ್ಮ ಅಮರ ರಾಷ್ಟ್ರದ ನವೋತ್ಥಾನದ ಉದ್ದೇಶ ಇದು.

“ಚಕ್ರವರ್ತಿಯೋಂ ಕೀ ಸಂತಾನ್, ಲೇಕರ್ ಜಗದ್ಗುರು ಕಾ ಜ್ಞಾನ್, ಬಡೆ ಚಲ್ ತೋ ಅರುಣ್ ವಿಹಾನ್,

ಕರನೆ ಕೊ ಆಯೆ ಅಭಿಷೇಕ್, ಪ್ರಶ್ನ್ ಬಹುತ್ ಸೆ ಉತ್ತರ್ ಏಕ್”.

ಭಾರತ್ ಮಾತಾ ಕೀ ಜಯ್

Leave a Reply

Your email address will not be published.

This site uses Akismet to reduce spam. Learn how your comment data is processed.