ಧಾರವಾಡ: ಹಿಂದುತ್ವ, ಧರ್ಮ, ಪರಂಪರೆ ಉಳಿವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯ. ಸದೃಢ ದೇಶ ಕಟ್ಟಲು ಯುವಜನ ತಯಾರಿಸುವ ಕೆಲಸ ಸಂಘ ಮಾಡುತ್ತಿದೆ ಎಂದು ಕರ್ನಾಟಕ ಉತ್ತರ ಪ್ರಾಂತ ಶಾರೀರಿಕ ಪ್ರಮುಖ ನಾಗೇಶ ಚೆನ್ನಾರೆಡ್ಡಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಧಾರವಾಡ ನಗರ ವಿಜಯದಶಮಿ ಉತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡ ಗಣವೇಷಧಾರಿಗಳ ಪಥಸಂಚಲನದ ಬಳಿಕ ಭಾರತ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಘವು ಹಿಂದುತ್ವದ ಮೌಲ್ಯಗಳ ಆಧಾರದ ಮೇಲೆ ಜೀವನ ನಡೆಸಲು ದೇಶದ ಕೋಟ್ಯಂತರ ಯುವ ಜನಾಂಗದಲ್ಲಿ ಆತ್ಮಜ್ಞಾನ ಮೂಡಿಸುತ್ತಿದೆ. ಈ ಕಾರ್ಯದ ತಪ್ಪಿಸನ ಫಲಕ್ಕೆ ಈಗ 98 ವರ್ಷಗಳು ಸಂದಿವೆ ಎಂದರು.

ನೀತಿಪಾಠ ಕಲಿಸುವ ಹಬ್ಬಗಳು

ಹಿಂದೂ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನ ಕುಟುಂಬದ ಏಕತ್ವ, ವ್ಯಕ್ತಿಯ ವ್ಯಕ್ತಿತ್ವ ಅರಳಿಸುವ ಪದ್ಧತಿಗಳು ಅಲ್ಲದೇ, ಮನುಕುಲದ ಅಭಿವೃದ್ಧಿಗೆ ನೀತಿ ಪಾಠವನ್ನೂ ಕಲಿಸುತ್ತವೆ. ರಾವಣನ ಸಂಹರಿಸುವ ಮೂಲಕ ಅಧರ್ಮದ ಮೇಲೆ ಧರ್ಮದ ವಿಜಯವೇ ವಿಜಯದಶಮಿ ಸಂಕೇತ.

-ನಾಗೇಶ ಚೆನ್ನಾರೆಡ್ಡಿ, ಕರ್ನಾಟಕ ಉತ್ತರ ಪ್ರಾಂತ ಶಾರೀರಿಕ ಪ್ರಮುಖ

ಸಮರ್ಪಣಾ ಭಾವದ ಮೌಲ್ಯಯುತ ವ್ಯಕ್ತಿಗಳ ನಿರ್ಮಾಣ, ದೇಶ-ಸಮಾಜಕ್ಕೆ ದುಡಿಯುವ ವ್ಯಕ್ತಿಗಳ ನಿರ್ಮಾಣ, ವ್ಯಕ್ತಿಗಳಲ್ಲಿ ಪರಿವರ್ತನೆ ತರುವುದು, ಹಿಂದು ಸಮಾಜದಲ್ಲಿ ಏಕಾತ್ಮ ಭಾವನೆ ಮೂಡಿಸುವುದು ಸಂಘದ ಉದ್ದೇಶವಾಗಿದೆ ಎಂದು ಹೇಳಿದರು.

ನಮ್ಮ ಇಂದಿನ ದುಸ್ಥಿತಿ ಹಾಗೂ ಅಧೋಗತಿಗೆ ಬ್ರಿಟಿಷರೇ ಕಾರಣ. ಅವರನ್ನು ದೇಶದಿಂದ ಹೊರಗೆ ಹಾಕಿದರೆ, ಹಾಲು-ಜೇನಿನ ಹೊಳೆ ಹರಿಯುತ್ತಿದೆ ಎಂಬ ಸತ್ಯ ಡಾಕ್ಟರ್ ಜೀ ಅರಿತು ಸಂಘ ಸ್ಥಾಪಿಸಿದರು ಎಂದರು.

ಸ್ವಯಂ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡು ಡಾಕ್ಟರ್ ಜೀ, ಕಾಂಗ್ರೆಸ್‌ನ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಆತ್ಮ ವಿಸ್ಮೃತಿ ಸಮಾಜ, ಆತ್ಮ ಕೇಂದ್ರೀತ ಸಮಾಜ, ಸಂಘಟನಾ ಹೀನತೆ ನಮ್ಮ ದುಸ್ಥಿತಿಗೆ ಕಾರಣ ಕಂಡು ಹಿಡಿದರೆಂದು ತಿಳಿಸಿದರು.

ಆತ್ಮ ವಿಸ್ಮೃತಿ ಸಮಾಜದಲ್ಲಿ ಆತ್ಮಜ್ಞಾನ ಮೂಡಿಸುವ ಕೆಲಸ ಸಂಘ ಮಾಡುತ್ತಿದೆ. ವ್ಯಕ್ತಿಯು ಸ್ವಯಂಕೇಂದ್ರೀತ ಜೀವನದಿಂದ ಹೊರಬಂದು, ಸಮಾಜ ಕೇಂದ್ರಿತ ಜೀವನ ನಡೆಸುವತ್ತ ಸಂಘ ಪ್ರೇರೆಪಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ವರು ಸಾಗಬೇಕು ಎಂದರು.

ನಗರದ ಖ್ಯಾತ ವೈದ್ಯ ಡಾ.ಪ್ರೀತಂ ಹುರಕಡ್ಲಿ ಸಮಾರಂಭದ ಆತಿಥ್ಯ ವಹಿಸಿ ಮಾತನಾಡಿ, ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಇದರಿಂದ ದೇಶದ ಪ್ರಗತಿ ಕುಂಠಿತಗೊಂಡಿದೆ. ಈ ಕಾರಣಕ್ಕೆ ಯುವಕರನ್ನು ಸನ್ಮಾರ್ಗದಲ್ಲಿ ನಡೆಸುವ ಕೆಲಸ ಸಂಘ ಮಾಡುತ್ತಿದೆ ಎಂದರು.


Leave a Reply

Your email address will not be published.

This site uses Akismet to reduce spam. Learn how your comment data is processed.