ಬೆಂಗಳೂರು, ಫೆ.1, 2024: ದಕ್ಷಿಣ ಭಾರತದಲ್ಲಿ ಭಾರತೀಯ ಪರಂಪರೆಯ ರಕ್ಷಕರಲ್ಲಿ ಕರ್ನಾಟಕದ ರಾಜಮನೆತನಗಳ ಕೊಡುಗೆ ಅಪಾರ. ‘ಐಡಿಯಾ ಆಫ್ ಭಾರತ್’ ಅನ್ನು ಉಳಿಸುವ ಕೆಲಸವನ್ನು ಕರ್ನಾಟಕ ಮಾಡುತ್ತಲೇ ಬಂದಿದೆ. ಎಲ್ಲಾ ಭಾರತೀಯರೂ ಕನ್ನಡಿಗರಾಗುವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬ ಕನ್ನಡಿಗನೂ ಭಾರತೀಯ ಎಂದು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಸಂಸ್ಕಾರ ಭಾರತಿ‌ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಫೆ.1 ರಿಂದ 4 ರವರೆಗೆ ಆಯೋಜಿಸಿರುವ ಅಖಿಲ ಭಾರತೀಯ ಕಲಾಸಾಧಕ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯನಗರ ರಾಜವಂಶಸ್ಥ ಕೃಷ್ಣದೇವರಾಯ ಮಾತನಾಡಿ ನಮ್ಮ ನಾಡಿನ ದೇವಾಲಯಗಳು ನಮ್ಮ ಶ್ರೀಮಂತ ಪರಂಪರೆಯ ಪ್ರತಿಬಿಂಬ. ಅವುಗಳ ಕೇಂದ್ರಿತವಾಗಿರುವ ಸಂಸ್ಕೃತಿ ಇಂದಿನ ಪೀಳಿಗೆಗೆ ಮುಂದಿನ ಭವಿಷ್ಯವನ್ನು ರೂಪಿಸುವ ರಹದಾರಿ. ಆದ್ದರಿಂದ ಅಂತಹ ಸಂಸ್ಕೃತಿಯನ್ನು ಸಾರುವ ಪುರಾತನ ದೇವಾಲಯಗಳನ್ನು ನಿರ್ಜೀವ ಕಟ್ಟಡಗಳಂತೆ ಇರಲು ಬಿಡದೆ ಅವುಗಳನ್ನು ಪುನರುಜ್ಜೀವನಗೊಳಿಸಿ ಸಂಸ್ಕೃತಿವಾಹಕಗೊಳಿಸಬೇಕಾದ ಕರ್ತವ್ಯ ನಮ್ಮೆಲ್ಲರದ್ದು ಎಂದು ನುಡಿದರು.

ಪದ್ಮಶ್ರೀ ಮಂಜಮ್ಮ ಜೋಗತಿ ಮಾತನಾಡಿ ಮಂಜಮ್ಮ ಪ್ರತಿ ವ್ಯಕ್ತಿಯೂ ಕಲಾವಿದನೆ. ಏಕೆಂದರೆ ಮನುಷ್ಯನ ಹುಟ್ಟು ಮತ್ತು ಸಾವುಗಳೆರಡೂ ಕಲೆಯೊಂದಿಗೆ ಆರಂಭವಾಗಿ ಅಂತ್ಯವಾಗುತ್ತದೆ. ಸಂಸ್ಕಾರವನ್ನು ಕಲಿಸುವ ಕಲೆಗಳನ್ನು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಲಿಸಬೇಕು. ವೃತ್ತಿಯ ಜೊತೆಗೆ ಕಲೆಯು ಪ್ರವೃತ್ತಿಯಾಗಿರಬೇಕು. ನಮ್ಮ ಹುಟ್ಟು ದೇವರು ನಿಶ್ಚಯಿಸಿರುವುದರಿಂದ ತೃತೀಯ ಲಿಂಗಿಗಳಾಗಿ ಜನಿಸುವ ಮಕ್ಕಳನ್ನು ಮನೆಯಿಂದ ಹೊರಹಾಕದೆ, ಅವರಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಅವರೂ ಸಾಧಕರಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಅಧ್ಯಕ್ಷ ವಾಸುದೇವ್ ಕಾಮತ್ ಮನುಷ್ಯನ ಜೀವನ ಕಲೆಯಿಂದ ಓತಪ್ರೋತವಾಗಿದೆ. ಅಂತಹ ಕಲೆಯನ್ನು ರಕ್ಷಿಸಬೇಕಾದ ಹೊಣೆ ನಮ್ಮದು. ಸಂಸ್ಕಾರ ಭಾರತಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಯೋಗೇಂದ್ರ ಸಿಂಗ್ ಮತ್ತು ಅಮೀರ್ ಚಾಂದ್ ಅವರ ಕುರಿತು ಪುಸ್ತಕ ಬಿಡುಗಡೆಗೊಂಡಿತು. ಚಿತ್ರಕಲೆ, ರಾಷ್ಟ್ರದ ವಿವಿಧ ರಾಜ್ಯಗಳ ಕಲಾಪ್ರಕಾರಗಳ ಪರಿಚಯ ಮಾಡಿಕೊಡುವ ಪ್ರದರ್ಶಿನಿ ಉದ್ಘಾಟನೆಗೊಂಡಿತು.

ವೇದಿಕೆಯಲ್ಲಿ ಕಲಾವಿದ ರವೀಂದ್ರ ಯಾವಗಲ್, ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಉಪಾಧ್ಯಕ್ಷ ಮೈಸೂರು ಮಂಜುನಾಥ, ಪ್ರಧಾನ ಕಾರ್ಯದರ್ಶಿ ಅಶ್ವಿನ್ ದಳ್ವಿ, ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಸುಚೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಸೇರಿದಂತೆ ಅನೇಕ ಗಣ್ಯರು, ರಾಷ್ಟ್ರಾದ್ಯಂತದಿಂದ ಆಗಮಿಸಿದ 2500ಕ್ಕೂ ಹೆಚ್ಚು ಕಲಾವಿದರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.