ಇಂದು ಗುರೂಜಿ ಗೋಳ್ವಲ್ಕರ್ ಅವರ 118ನೇ ಜಯಂತಿ

ಸಿ.ಆರ್.ಮುಕುಂದ, ಸಹ ಸರಕಾರ್ಯವಾಹರು, ರಾ.ಸ್ವ.ಸಂಘ

  • (ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯಲ್ಲಿ ಡಿಸೆಂಬರ್ 3, 2020ರಂದು ನಡೆದ ಶ್ರೀ ನೂರ್ ಅಹಮದ್ ಅಲಿ ಖಾನ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಮಾನ್ಯ ಮುಕುಂದ ಸಿ.ಆರ್ ಅವರು ಮಾಡಿದ ‘ವರ್ತಮಾನ ಯುಗಕ್ಕೆ ಶ್ರೀ ಗುರೂಜಿ ಚಿಂತನೆಗಳ ಪ್ರಸ್ತುತತೆ’ ವಿಷಯದ ಉಪನ್ಯಾಸದ ಪೂರ್ಣಪಾಠ.)

‘ಯುಗ’ ಎನ್ನುವ ಶಬ್ದ ಭಾರತದ ವಿಶಿಷ್ಟವಾದ ಕೊಡುಗೆ. ಇದು ‘ಯುಜ್’ ಧಾತುವಿನಿಂದ ಬಂದಿದೆ. ಅದು ಕೂಡಿಸುವುದು ಎಂಬ ಅರ್ಥವನ್ನೂ ಕೂಡ ಹೊಂದಿದೆ. ಸಾಮಾನ್ಯ ಬಳಕೆಯ ಅರ್ಥದಲ್ಲಿ ಯುಗವನ್ನು ಹೆಚ್ಚಾಗಿ ಕಾಲಖಂಡಕ್ಕೆ ವ್ಯಾಪಿಸಿ ಬಳಕೆ ಮಾಡಲಾಗುತ್ತದೆ. ಇದಕ್ಕೆ ಬೇರೆ ಅರ್ಥಗಳಿದ್ದರೂ ಅದನ್ನು ಹೆಚ್ಚಾಗಿ ಕಾಲಕ್ಕೆ ಜೋಡಿಸಿಕೊಂಡೇ ಬಳಸಲಾಗುತ್ತದೆ. ಇನ್ನು ಕೆಲವೊಮ್ಮೆ ವ್ಯಕ್ತಿಗಳ ಜೊತೆಗೂ ಜೋಡಿಸಿಕೊಂಡು ಬಳಸಲಾಗುತ್ತದೆ. ಯುಗ ಪುರುಷ, ಯುಗ ಪ್ರವರ್ತಕ ಎನ್ನುವ ಪದಗಳು ಬಳಕೆಯಲ್ಲಿವೆ. ಒಂದು ಪರಿಸ್ಥಿತಿಯಿಂದ ಇನ್ನೊಂದು ಪರಿಸ್ಥಿತಿಗೆ ಬದಲಾಗುವುದು, ಹಿಂದೆ ಇದ್ದಿದ್ದನ್ನು ಬಿಟ್ಟು ಮುಂದಕ್ಕೆ ನೋಡುವುದನ್ನೂ ಯುಗ ಎಂದು ನೋಡುತ್ತೇವೆ. ಕಂಪ್ಯೂಟರ್ ಯುಗ, ಟೆಕ್ನಾಲಜಿ ಯುಗ ಎನ್ನುವ ಪದಬಳಕೆ ಇಂದು ಚಾಲ್ತಿಯಲ್ಲಿದೆ. ಬೆಳವಣಿಗೆಯಾಗಿ ಬದಲಾವಣೆಯಾಗಿರುವುದೆಲ್ಲವನ್ನೂ ಯುಗ ಎಂದು ಕರೆಯುವ ಪ್ರವೃತ್ತಿ ಭಾರತೀಯರದ್ದು. ಹೀಗೆ ಭಾರತೀಯ ಪರಿಕಲ್ಪನೆಯಲ್ಲಿ ಯುಗ ಎಂದರೆ ವ್ಯಾಪಕವಾದ ಅರ್ಥಗಳಿವೆ. ಚತುರ್ಯುಗಗಳ ಕಲ್ಪನೆ ಲಕ್ಷಾಂತರ ವರ್ಷಗಳಿಗೆ ಸಂಬಂಧಪಟ್ಟಿದ್ದು, ಆದರೆ ಇವತ್ತಿನ ಭಾಷಣದಲ್ಲಿ ಯುಗವನ್ನು ಕಳೆದ ನಲ್ವತ್ತು ಐವತ್ತು ವರ್ಷಗಳ ಮಟ್ಟಿಗೆ ಅಥವಾ ವರ್ತಮಾನದ ವ್ಯಾಪ್ತಿಯಲ್ಲಿ ಯೋಚನೆ ಮಾಡಿದರೆ ಹೆಚ್ಚು ಸೂಕ್ತ ಎನಿಸುತ್ತದೆ.

ನಿಂತು ನೋಡುವ ನೆಲೆ ಯಾವುದು?: ನಾವು ಯಾವ ಸ್ಟಾಂಡ್ ಪಾಯಿಂಟ್ನಲ್ಲಿ ಅಂದರೆ ಎಲ್ಲಿ ನಿಂತು ಯೋಚನೆ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ, ಜಗತ್ತಿನ ಕಾಲಘಟ್ಟವನ್ನು ಟೆಕ್ನಾಲಜಿ ಯುಗ, ನ್ಯೂ ಎಕಾನಮಿ, ಕೈಗಾರಿಕ ಕ್ರಾಂತಿ ಎಂದು ವಿಶ್ಲೇಷಣೆ ಮಾಡುವುದಿದೆ. $200 ಶತಮಾನವನ್ನು ಮಾಡರ್ನ್, ಪೋಸ್ಟ್ ಮಾಡರ್ನ್ ಎಂದು ವಿಭಜನೆ ಮಾಡಿ ಕೂಡ ಹೇಳುವುದಿದೆ. ಇತ್ತೀಚೆಗಂತೂ ಕೊರೋನ ಬಂದ ಮೇಲೆ ಬಿಫೋರ್ ಕೊರೋನ, ಆಫ್ಟರ್ ಕೊರೋನ (ಬಿಸಿ, ಎಸಿ) ಎಂದು ಹಾಸ್ಯವಾಗಿ ಹೇಳುವುದಿದೆ. ಇಷ್ಟೊಂದು ರೀತಿಯಲ್ಲಿ ವ್ಯಾಖ್ಯಾನ ಇರಬೇಕಾದರೆ, ಯುಗದ ಬಗೆಗೆ ಹೆಚ್ಚಿನ ವ್ಯಾಖ್ಯಾನಗಳು ಇವತ್ತು ಮಂಡಿಸಲ್ಪಡುತ್ತಿರುವುದು ಪಾಶ್ಚಾತ್ಯ ದೃಷ್ಟಿಕೋನದಿಂದಲೇ, ಟೆಕ್ ಯುಗ, ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಇವು ಸೂಕ್ತವೇ. ಆದರೆ ನಾವೆಲ್ಲಿ ನಿಂತು ನೋಡುತ್ತಿದ್ದೇವೆ ಎಂದು ಅವಲೋಕಿಸಿದರೆ ಪಾಶ್ಚಾತ್ಯ ಜಗತ್ತಿನ ಮೇಲೆ ಅದರ ವ್ಯಾಪ್ತಿ ವಿಸ್ತಾರವಾಗಿರುವುದು ಕಾಣಿಸುತ್ತದೆ. ಆದ್ದರಿಂದ ಆ ಹಿನ್ನೆಲೆಯಲ್ಲಿಯೇ ನಾವು ಯುಗವನ್ನು ನೋಡುತ್ತಿದ್ದೇವೆ.

ಇಯಾನ್ ಮೋರೀಸ್ ಎನ್ನುವ ಚಿಂತಕ ಎರಡು ದಶಕಗಳಲ್ಲಿ ಎರಡು ಪ್ರಮುಖ ಪುಸ್ತಕಗಳನ್ನು ಬರೆದಿದ್ದಾರೆ. ಮೊದಲನೆಯ ಪುಸ್ತಕ WHY THE WEST RULES – FOR NOW ದಲ್ಲಿ ವೆಸ್ಟ್ ಅಂದರೆ ಪಾಶ್ಚಾತ್ಯ ದೃಷ್ಟಿ, ಪಾಶ್ಚಾತ್ಯ ಚಿಂತನೆ ಎಂದೇ ಚಿತ್ರಿಸಿದ್ದಾನೆ. ಇಡೀ ಜಗತ್ತಿನಲ್ಲಿ ಕಲೋನಿಯಲಿಸಂ, ಸೈನಿಕ ಆಕ್ರಮಣ ಇವೆಲ್ಲವೂ ಒಂದು ಭಾಗ. ಆದರೆ ಈ ಚಿಂತನೆಗಳು ಇಡೀ ವಿಶ್ವವನ್ನು ವ್ಯಾಪಿಸಿದೆ ಎನ್ನುವ ಅರ್ಥದಲ್ಲಿ ಇಡೀ ವಿಶ್ವವನ್ನು ಅದೇ ಕನ್ನಡಕದ ಮೂಲಕವೇ ನೋಡುತ್ತಿರುವುದು ಯಾಕೆ ಎಂಬುದನ್ನು ಆತ ವಿಶ್ಲೇಷಣೆ ಮಾಡಿದ್ದಾನೆ. ಇದು ನಮ್ಮ ದೇಶಕ್ಕೂ ಕೂಡ ಅನ್ವಯವಾಗುತ್ತದೆ. ಏಕೆಂದರೆ ನಾವು ವರ್ತಮಾನ ಎಂಬ ವಿಷಯವನ್ನು ಗಮನಿಸಿದರೆ ಅನೇಕ ಬಾರಿ ಆ ದೃಷ್ಟಿ ನಮ್ಮ ದೃಷ್ಟಿಯೂ ಆಗಿಬಿಟ್ಟಿದೆ. ಆದರೆ ಶ್ರೇಷ್ಠ ಚಿಂತಕ ಮತ್ತು ಗಾಂಧಿವಾದಿಯಾಗಿದ್ದ ಧರ್ಮಪಾಲ್ ಅವರು ತಮ್ಮ ‘ಭಾರತೀಯ ಚಿತ್ರ ಮಾನಸ’ದಲ್ಲಿ ಇದನ್ನು ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ.  ಅವರೆನ್ನುವಂತೆ, ‘ಸಮಸ್ಯೆ ಇರುವುದು ತಮ್ಮ ಸಹಜತೆಯನ್ನು ಮತ್ತು ಚಿತ್ತವನ್ನು ಉಳಿಸಿಕೊಂಡು ತಮ್ಮ ಕಾಲಮಾನದಲ್ಲಿ ಬಾಳುತ್ತಿರುವ ಕೋಟ್ಯಂತರ ಜನರದ್ದು’. ಈ ಜನರ ಬೆಂಬಲದಿಂದ ದೇಶವನ್ನು ನಡೆಸಬೇಕಾದಲ್ಲಿ ಅವರ ಸಹಜ ಮಾನಸಿಕತೆಯನ್ನೂ, ಚಿತ್ತವನ್ನೂ, ಕಾಲವನ್ನೂ ಅರಿತುಕೊಳ್ಳಬೇಕಾಗುತ್ತದೆ. ಈ ಮಾನಸಿಕತೆಯ ಹಿನ್ನೆಲೆಯಲ್ಲಿ ವರ್ತಮಾನ ಕಾಲ ಹೇಗೆ ಕಾಣುತ್ತದೆಂದು ಗ್ರಹಿಸಬೇಕಾಗುತ್ತದೆ. ಅಂದರೆ ನಮ್ಮ ವರ್ತಮಾನ ಯಾವುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇಂದು ತಂತ್ರಜ್ಞಾನದ ಕಾರಣಕ್ಕಾಗಿ ಎಲ್ಲರ ಕೈಗಳಲ್ಲೂ ವಿಶ್ವವೇ ಅಡಗಿರುವುದರಿಂದ ಹೆಚ್ಚಿನ ಚಿಂತನೆಗಳು ಪಾಶ್ಚಾತ್ಯ ಹಿನ್ನೆಲೆಯಲ್ಲಿ ಕಂಡುಬಿಡುವ ಸಂದರ್ಭ ಇದೆ. ನಾವು ಇಲ್ಲಿ ನಿಂತು ವರ್ತಮಾನ ಯುಗ ಅಥವಾ ಕಾಲ ಬಂದ ಯಾವುದು ಎಂಬುದನ್ನು ನೋಡಬೇಕು. ಇದು ಇಂದು ವ್ಯಕ್ತವಾಗುತ್ತಿರುವ ವಿಷಯಕ್ಕೆ ಸಂಬಂಧಪಟ್ಟಿದ್ದು.

ಶ್ರೀ ಗುರೂಜಿಯವರ ಚಿಂತನೆಗಳು ಎಂದಾಗ ಅದು ಒಬ್ಬ ಮಾಧವ ಸದಾಶಿವ ಗೋಳ್ವಲ್ಕರ್ ಎನ್ನುವ ವ್ಯಕ್ತಿಯ ನಾಲ್ಕು ದಶಕಗಳ ಕಾಲದ ಚಿಂತನೆ, ಮಾರ್ಗದರ್ಶನ, ವಿಚಾರಗಳು ಮಾತ್ರವಲ್ಲ. ಅದನ್ನು ಒಬ್ಬ ವ್ಯಕ್ತಿಯ ಚಿಂತನೆಗಳು ಎಂಬುದಕ್ಕೆ ಸೀಮಿತಗೊಳಿಸಲೂಬಾರದು. ಸ್ವತಃ ಗುರೂಜಿಯವರೇ ಒಮ್ಮೆ ತಮ್ಮ ಭಾಷಣದಲ್ಲಿ, ‘ನಾನು ವ್ಯಕ್ತಪಡಿಸುತ್ತಿರುವ ವಿಚಾರಗಳಲ್ಲಿ ನನ್ನದೇನೂ ಇಲ್ಲ, ಅವೆಲ್ಲವೂ ಸಾವಿರಾರು ವರ್ಷಗಳಿಂದ ಇರುವ ಸನಾತನ ದೃಷ್ಟಿ ಮತ್ತು ಮೌಲ್ಯಗಳಲ್ಲಿರುವಂಥದ್ದು’ ಎಂದಿದ್ದರು. ಹಾಗಾಗಿ ಗುರೂಜಿ ಚಿಂತನೆಗಳನ್ನು ಕೇವಲ ವ್ಯಕ್ತಿಯೊಬ್ಬನ ಚಿಂತನೆಗಳಾಗಿ ನೋಡದೆ ವಿಶಾಲವಾಗಿ ನೋಡಬೇಕು. ಒಬ್ಬ ಗುರೂಜಿ ಮಾತ್ರವಲ್ಲ, ನಮ್ಮ ಮಹಾಪುರುಷರೆಲ್ಲರೂ ತಮ್ಮ ವಿಚಾರಗಳನ್ನು ಮುಂದಿಡುವಾಗ ಅದು ತಮ್ಮದು ಮಾತ್ರ, ತಮ್ಮದು ಹೊಸ ಚಿಂತನೆ ಎನ್ನುತ್ತಿರಲಿಲ್ಲ. ಅದು ತಮ್ಮ ಪೂರ್ವಜರಿಂದ ಸನಾತನದಿಂದ ಬಂದವು, ಅದನ್ನು ನಾನು ವರ್ತಮಾನದಲ್ಲಿ ಇಡುತ್ತಿದ್ದೇನೆ ಎನ್ನುತ್ತಿದ್ದರು.

ಸಿದ್ಧವಾದ ನೆಲದಲ್ಲಿ ಬೆಳೆದ ಪೈರು: ಇಡಿ ಕೋವೆಲ್ ಎಂಬ ಪಾಶ್ಚಾತ್ಯ ವಿದ್ವಾಂಸರೊಬ್ಬರು ಭಾರತದ ಶಾಸ್ತ್ರಗಳ ಬಗ್ಗೆ ವಿಶೇಷ ಅಧ್ಯಯನವನ್ನು ಮಾಡಿದ್ದವರು. ನ್ಯಾಯಶಾಸ್ತ್ರದ ಕುರಿತಾಗಿ ಉದಯನ ಎಂಬ ನ್ಯಾಯಯಿಕನ ‘ಕುಸುಮಾಂಜಲಿ’ಯನ್ನು ಅನುವಾದ ಮಾಡಿದವರು. ಅದರ ಮುನ್ನುಡಿಯಲ್ಲಿ ಕೋವೆಲ್, ‘ಆತ ಭಾರತದ ಸಾಹಿತ್ಯ ಗಗನದಲ್ಲಿ ಧ್ರುವತಾರೆಯಂತೆ ಶೋಭಿಸುತ್ತಿದ್ದಾನೆ. ಆದರೆ ಯಾವ ದೂರದರ್ಶಕಕ್ಕೂ ಅದು ಎಷ್ಟು ದೊಡ್ಡದು ಎಂಬುದನ್ನು ತೋರಿಸಲು ಸಾಧ್ಯವಾಗಿಲ್ಲ’ ಎಂದು ಬರೆಯುತ್ತಾನೆ. ಹೀಗೆ ಎಲ್ಲರೂ ಸನಾತನ ವಿಚಾರಗಳನ್ನು ಅಜ್ಞಾತವಾಗಿ ಮುಂದುವರೆಸಿಕೊಂಡು ಬಂದರು. ಗುರೂಜಿ ಚಿಂತನೆ ಕೂಡ ಅಂಥದ್ದು. ಅದು ಅರವಿಂದರ ಚಿಂತನೆಯನ್ನೂ ಒಳಗೊಳ್ಳುತ್ತದೆ. ಗಾಂಧಿ ಚಿಂತನೆಗಳನ್ನೂ ಒಳಗೊಳ್ಳುತ್ತದೆ, ಧರ್ಮಪಾಲ್ ಚಿಂತನೆಗಳು ಮತ್ತು ಸ್ವತಃ ಗುರೂಜಿಯವರ ಚಿಂತನೆಯ ನೆರಳಲ್ಲಿ ಪರಿಪಾಕಗೊಂಡ ಏಕಾತ್ಮ ಮಾನವತಾವಾದದ ಮೂಲಕ ವಿಚಾರ ಮಂಡಿಸಿದ ಪಂ. ದೀನದಯಾಳ ಉಪಾಧ್ಯಾಯರ ಚಿಂತನೆಗಳು, ದತ್ತೋಪಠ ಠೇಂಗಡಿಯವರ ವಿಚಾರಗಳನ್ನೂ ಅದು ಒಳಗೊಳ್ಳುತ್ತದೆ. ಈ ಎಲ್ಲಾ ವಿಚಾರಗಳೂ ಸನಾತನವಾಗಿ, ನಿರಂತರವಾಗಿ ಬಂದಿರುವಂಥದ್ದು. ಓರ್ವ ತತ್ತ್ಚ ಚಿಂತಕ ಹೇಳುವಂತೆ “ಅವರಿಗಾಗಿ ಸಿದ್ಧವಾಗಿರುವ ನೆಲದಲ್ಲಿ ಅವರು ಬೆಳೆಯುತ್ತಾರೆ” ಅಂದರೆ ಉಸಿರಾಡುವ ಬೌದ್ಧಿಕ ವಾತಾವರಣವನ್ನು ಸೃಷ್ಟಿಸಿದವರು ಅವರಲ್ಲ. ಗುರೂಜಿಯವರಂತೂ ತಮ್ಮ ಅಭಿಪ್ರಾಯಗಳನ್ನು ನೇರವಾಗಿ, ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಭಾರತದ ನೆಲದಲ್ಲೇ ಆ ಗುಣವಿದೆ ಮತ್ತು ಸನಾತನ ಮೌಲ್ಯಗಳನ್ನು ನಿರಂತರವಾಗಿ ಪ್ರತಿಪಾದನೆ ಮಾಡುತ್ತಾ ಹಲವರಿದ್ದಾರೆ. ಅಂಥವರಲ್ಲಿ ಒಬ್ಬರು ಗುರೂಜಿಯವರು. ಅವರು ನಾಲ್ಕು ದಶಕಗಳ ಕಾಲ ದೇಶಾದ್ಯಂತ ಓಡಾಡಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು. ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಒಂದು ಶಾಶ್ವತವಾದ ದೃಷ್ಟಿಕೋನವನ್ನು ಹೊಂದಿದಂಥದ್ದು ಮತ್ತು ಅತ್ಯಂತ ಸುಲಭದಲ್ಲಿ ಆಳವಡಿಸಿಕೊಳ್ಳಬಹುದಾದಂಥದ್ದು. ಜಗತ್ತಿನ ಬದಲಾವಣೆಗಳು ಅನೇಕ ರೀತಿಯಿಂದ ಆಗಿರಬಹುದು. ಅದರ ಸ್ತರ ಅಂದರೆ ಸಮಾಜ ವ್ಯವಸ್ಥೆ, ಆಡಳಿತ ಮೊದಲಾದ ಸ್ತರಗಳಲ್ಲಿ ನಾವು ಕಲ್ಪನೆ ಮಾಡಿಕೊಂದರೆ ಅನೇಕ ಬದಲಾಣೆಗಳಾಗಿದ್ದರೂ ಕೂಡ ಸ್ಥಿರವಾದಂಥ ಚಿಂತನೆಗಳು ಕಾಣುತ್ತದೆ. ಸಾವಿರಾರು ವರ್ಷಗಳಿಂದ ಋಷಿಮುನಿಗಳು, ಚಿಂತಕರ ಶಾಶ್ವತವಾದ ದೃಷ್ಟಿಕೋನಗಳು ಬದಲಾವಣೆಯಾದ ಸ್ತರಗಳಿಗೆ ಬುನಾದಿಯಾಗಿರುವುದು ಗೋಚರವಾಗುತ್ತದೆ. ಹಾಗೆಯೇ ನಲ್ವತ್ತು ವರ್ಷಗಳ ಹಿಂದೆ ಗುರೂಜಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಇಂದಿನ ವಿಶ್ವದ ಅನೇಕ ವಿಚಾರಗಳು ಪ್ರಸ್ತುತವಾಗುತ್ತವೆ. ಶಾಶ್ವತವಾದ ದೃಷ್ಟಿಯನ್ನೇ ಗುರೂಜಿ ಮತ್ತು ಇತರ ಭಾರತೀಯ ಚಿಂತಕರು ನೀಡಿದ್ದಾರೆ. ವ್ಯಕ್ತಿಗಳು ಬದಲಾಗಬಹುದು, ಆದರೆ ದೃಷ್ಟಿ ಮತ್ತು ಶಾಶ್ವತ ಚಿಂತನೆ ಸ್ಥಿರವಾಗಿರುತ್ತವೆ. ಈ ದೃಷ್ಟಿಯಿಂದ ನಾವು ಗುರೂಜಿಯವರ ಚಿಂತನೆಗಳನ್ನು ನೋಡಬೇಕಾಗಿದೆ.

ಬಿಡಿಯಾಗಲ್ಲ, ಇಡಿಯಾಗಿ ನೋಡುವ ದೃಷ್ಟಿ: ಗುರೂಜಿಯವರು ಸುಮಾರು ಮೂವತ್ತೈದು ನಲ್ವತ್ತು ವರ್ಷಗಳವರೆಗೆ ಜಗತ್ತಿನ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯ ಪ್ರಮುಖರಾಗಿದ್ದರು. ಆದರೆ ಅದಕ್ಕೂ ಸಾಕಷ್ಟು ಮುಂಚೆನೇ ಅವರು ಅನೇಕ ಅಭಿಪ್ರಾಯಗಳನ್ನು ತಮ್ಮ ಭಾಷಣ ಮತ್ತು ಲೇಖನಗಳ ಮೂಲಕ ವ್ಯಕ್ತಪಡಿಸಿದ್ದರು. ದೀರ್ಘಕಾಲದಲ್ಲಿ ಸಾರ್ವಜನಿಕ ರಂಗದಲ್ಲಿದ್ದ ಅಂಬೇಡ್ಕರ್ ಕೂಡ ತಮ್ಮ ಅಭಿಪ್ರಾಯಗಳನ್ನು ಕಾಲಕಾಲಕ್ಕೆ ವ್ಯಕ್ತಪಡಿಸಿದ್ದರು. ಅನೇಕ ಬಾರಿ ಅವರು ಮೊದಲ ದಶಕದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಕೊನೆಯ ದಶಕದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ತದ್ವಿರುದ್ಧವೂ ಆಗಿರಬಹುದು. ಆದರೆ ನಾವು ಒಟ್ಟು ಅವರ ಜೀವನ ಸಂದೇಶಗಳು ಏನಿದ್ದವು ಎಂಬುದನ್ನು ನೋಡಬೇಕಾಗುತ್ತದೆ. ವರ್ತಮಾನಕ್ಕೆ ತಕ್ಕಂತೆ ಅಭಿಪ್ರಾಯಗಳು ಬದಲಾಗಬಹುದು. ಗಾಂಧೀಜಿಯವರ ಅಭಿಪ್ರಾಯಗಳನ್ನೇ ತೆಗೆದುಕೊಂಡರೆ ನಮಗೆ ಅಂಥ ಭಿನ್ನ ಅಭಿಪ್ರಾಯಗಳು ಕಾಣಿಸುತ್ತವೆ. ದಶಕಗಳ ಕಾಲ ಅವರು ಬೇರೆಬೇರೆ ಸಂದರ್ಭ ಮತ್ತು ಕಾಲದಲ್ಲಿ ಬೇರೆಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ನಾವು ವೈರುಧ್ಯ ಎಂದು ಗುರುತಿಸುವ ಬದಲು ಒಟ್ಟು ಜೀವನ ಸಂದೇಶ ಎಂದು ಗುರುತಿಸಬೇಕು.
ಅರುಣ್ ಶೌರಿಯವರು ಅಂಬೇಡ್ಕರರ ಬಗ್ಗೆ ದಿ ಫಾಲ್ಸ್ ಗಾಡ್’ ಬರೆದಾಗ ದತ್ತೋಪಂಥ ಠೇಂಗಡಿಯವರು ಅನೌಪಚಾರಿಕ ವಾಗಿ ಇದನ್ನೆ ಹೇಳಿದ್ದರು. ಅಂಬೇಡ್ಕರರ ಒಟ್ಟು ಜೀವನದ ಸಂದೇಶವೇನಿತ್ತು ಎಂಬುದನ್ನು ಮಾತ್ರ ನೋಡಬೇಕು ಎಂದಿದ್ದರು. ವಿವೇಕಾನಂದರ ಬಗ್ಗೆ ಕೂಡ ಬೇರೆಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಿದ್ದಾರೆ. ಅವರು ಮಾರ್ಕ್ವಾದಿಯಾಗಿದ್ದರು ಎಂದು ಬಿಂಬಿಸಲು ಹೊರಟವರೂ ಇದ್ದಾರೆ. ಹೀಗೆ ಬಿಡಿಬಿಡಿಯಾಗಿ ವ್ಯಕ್ತವಾದ ಅಭಿಪ್ರಾಯಗಳನ್ನು ಕಟ್ಟಿ ಚಿಂತನೆಯನ್ನು ಇದಮಿತ್ಥಂ ಎಂದು ಹೇಳಲಾಗುವುದಿಲ್ಲ. ಹೀಗೆ ಮಾಡಿ ನಾವು ವಿವೇಕಾನಂದರನ್ನೂ ಮಾರ್ಕ್ಸ್ವಾದಿ ಎಂದು ಹೇಳಿಬಿಡಬಹುದು. ಆದರೆ ಅದಕ್ಕೂ ಮೀರಿ ವಿವೇಕಾನಂದರ ಜೀವನ ಸಂದೇಶವೇನು ಎಂಬುದನ್ನು ನೋಡಬೇಕಾಗಿದೆ. ಅದೇ ರೀತಿ ಗುರೂಜಿಯವರ ಜೀವನದ ಸಂದೇಶವನ್ನು ಗ್ರಹಿಸಬೇಕಾಗಿದೆ. ಅವರು ಸನಾತನದ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಈ ಹಿನ್ನೆಲೆಯಲ್ಲಿ ನೋಡಿ ಗುರೂಜಿ ಚಿಂತನೆಗಳನ್ನು ಗ್ರಹಿಸಬೇಕಾಗಿದೆ.


ಅಂತರಂಗದಲ್ಲಿ ಸುಖದ ಹುಡುಕಾಟ: ಇವತ್ತಿನ ಕಾಲಖಂಡಕ್ಕೆ ಸಂಬಂಧಿಸಿದಂತೆ ಗುರೂಜಿಯವರ ಚಿಂತನೆಯ ನಾಲ್ಕು ಅಂಶಗಳನ್ನು ಪ್ರಸ್ತುತಪಡಿಸುವುದು ಸಮಂಜಸ ಎನಿಸುತ್ತದೆ. ಅನೇಕ ವಿಚಾರಗಳು, ಉದಾಹರಣೆಗೆ ಸಾಮಾಜಿಕ ಸಾಮರಸ್ಯ, ಧಾರ್ಮಿಕ ವಿಚಾರಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಅವರು ಸಮಾಜಕ್ಕೆ ಕೊಟ್ಟಿದ್ದಾರೆ. ಬದುಕನ್ನು ನಾವು ಹೇಗೆ ನೋಡುತ್ತಿದ್ದೇವೆ, ತಂತ್ರಜ್ಞಾನ ನಮ್ಮೆಲ್ಲರನ್ನು ಹೇಗೆ ಆವರಿಸಿದೆ, ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಣದ ಪಾತ್ರ ಪರಿಣಾಮಗಳ ಬಗ್ಗೆ ಸನಾತನ ಚಿಂತನೆ ಹೇಗಿತ್ತು ಎನ್ನುವುದು ಹಾಗೂ ರಾಷ್ಟ್ರೀಯತೆ-ಜಾಗತೀಕರಣ ಮುಂತಾದ ಜಾಗತಿಕ ವ್ಯವಸ್ಥೆಗಳ ಕುರಿತ ಗುರೂಜಿಯವರ ಚಿಂತನೆಗಳು ಏನಿದ್ದವು ಎಂಬ ನಾಲ್ಕು ಸಂಗತಿಗಳನ್ನು ಮಾತ್ರ ಈ ಸೀಮಿತ ಅವಧಿಯಲ್ಲಿ ಹೇಳಬಹುದು ಅಥವಾ ವರ್ತಮಾನದಲ್ಲಿ ಗುರೂಜಿಯವರ ಚಿಂತನೆಯನ್ನು ಈ ನಾಲ್ಕು ನೆಲೆಗಟ್ಟಿನಲ್ಲಿ ಪ್ರಮುಖವಾಗಿ ಮಂಡಿಸಬಹುದು.


ಮೊದಲನೆಯದು, ಇವತ್ತು ಭಾರತೀಯ ನೆಲೆಯಲ್ಲಿ ನಿಂತು ಬದುಕನ್ನು ನೋಡುವ ದೃಷ್ಟಿ ಏನಾಗಿದೆ ಎಂಬುದು. ಹಾಗೆ ನೋಡಿದರೆ ಪಾಶ್ಚಾತ್ಯ ಜಗತ್ತಿನ ಬದುಕಿನ ದೃಷ್ಟಿಕೋನ ಇಂದು ಭಾರತದಲ್ಲೂ ಬರುತ್ತಿದೆ. ಅದಕ್ಕೆ ತಂತ್ರಜ್ಞಾನ ಮತ್ತು ಸಂಪರ್ಕ ಸಾಧನಗಳು ಕಾರಣ, ಪಾಶ್ಚಾತ್ಯ ಜಗತ್ತಿನಲ್ಲಿ ನಡೆವ ಅನೇಕ ವಿದ್ಯಮಾನಗಳು ಇಂದು ನಮ್ಮಲ್ಲೂ ನಡೆಯುತ್ತಿವೆ. ಅನೇಕ ಶಬ್ದಗಳನ್ನು ನಾವಿಂದು ಇಲ್ಲೂ ಕೇಳುತ್ತಿದ್ದೇವೆ. ಲಿಬರಲ್, ಅಲ್ಟಾ ಲಿಬರಲ್, ವೋಕ್ ಮೆಂಟಾಲಿಟಿ ಮೊದಲಾದ ಪರಿಭಾಷೆಗಳು ಇಂದು ಚಾಲ್ತಿಯಲ್ಲಿವೆ. ಬದುಕನ್ನು ನೋಡುವ ರೀತಿ ಈ ಶಬ್ದಗಳ ಒಳಾರ್ಥದಲ್ಲಿವೆ. ಈ ಶಬ್ದಗಳಿಗೆ ಅನೇಕ ಬಾರಿ ಉತ್ತಮ ಅರ್ಥಗಳೂ ಇವೆ. ಉದಾಹರಣೆಗೆ ವೋಕ್ ಎಂದರೆ ಜಾಗ್ರತವಾದ ಮನಸ್ಸು ಎಂಬ ಅರ್ಥವಿದೆ. ವಿಶೇಷವಾಗಿ ಅಮೆರಿಕನ್ ಕರಿಯ ಜನಾಂಗವನ್ನು ಸಮಾನತೆಯಿಂದ ನೊಡಬೇಕು ಎಂಬ ಮಹತ್ತಾದ ಅರ್ಥದಲ್ಲಿ ಅದು ಪ್ರಚಲಿತವಾಗಿತ್ತು. ಆದರೆ ಇಂದು ಆ ಶಬ್ದ, ‘ನಾನು ಏನು ಬೇಕಾದರೂ ಮಾಡುತ್ತೇನೆ’, ‘ನನ್ನನ್ನು ಯಾರೂ ಕೇಳಬಾರದು’ ಎಂಬ ಅರ್ಥದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಲಿಬರಲ್ ಎನ್ನುವುದಕ್ಕೆ ಉದಾರ ಮನಸ್ಸು ಎಂಬ ಶಬ್ದಾರ್ಥವಿದ್ದರೂ ಇಂದು ಅದು ಕೂಡ ಅಲ್ಲಿಗೇ ಹೋಗಿ ಮುಟ್ಟುತ್ತದೆ. ನಾನು, ನನ್ನದು, ನನ್ನ ಸುಖ, ನನ್ನನ್ನು ಯಾರೂ ಕೇಳುವಂತಿಲ್ಲ, ನನಗೆ ಎಲ್ಲದರಲ್ಲೂ ವಿನಾಯತಿಯಿದೆ ಎಂಬ ಈ ಮಾನಸಿಕತೆ ಬದುಕನ್ನು ನೋಡುವ ಮಾನಸಿಕತೆಯಾಗಿ ಬದಲಾಗುತ್ತಿದೆ. ಇವೆಲ್ಲವೂ ಒಂದು ಕಾಲದಲ್ಲಿ ಅಮೆರಿಕಾ ಮತ್ತು ಇತರ ಪಾಶ್ಚಾತ್ಯ ದೇಶಗಳಲ್ಲಿ ಉಂಟಾಗಿದ್ದು ಇಂದು ಭಾರತಕ್ಕೂ ದಾಂಗುಡಿಯಿಟ್ಟಿದೆ. ಭಾರತದಲ್ಲೂ ಈ ಅರ್ಥದಲ್ಲಿ ಯೋಚನೆ ಮಾಡುವ ವರ್ಗ ಹುಟ್ಟಿಕೊಂಡಿದೆ. ಬದುಕಿನ ಬಗ್ಗೆ ದೃಷ್ಟಿ ಎಂದಾಗ ಎಲ್ಲರ ದೃಷ್ಟಿಯೂ ಒಂದೇ ರೀತಿ ಇರುವುದಿಲ್ಲ, ಎಲ್ಲ ಸಮುದಾಯ, ಎಲ್ಲ ವರ್ಗ, ಎಲ್ಲ ವ್ಯಕ್ತಿಗಳ ದೃಷ್ಟಿಯೂ ಒಂದೇ ರೀತಿ ಇರುವುದಿಲ್ಲ. ಆದರೆ ಯಾವುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಮತ್ತು ಯಾವುದು ತ್ವರಿತವಾಗಿ ವ್ಯಾಪಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ನೋಡಿದರೆ ಈ ವೋಕ್, ಲಿಬರಲ್ ಇತ್ಯಾದಿಗಳ ವ್ಯಾಪಕತೆ ಹೆಚ್ಚಾಗುತ್ತಿದೆ. ಇಂದಿನ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದ ತಂದೆ ತಾಯಿಗಳಿಗೂ ಅನಿಸುತ್ತದೆ. ನಮ್ಮ ಬದುಕಿನಲ್ಲಿ ಇದು ನೇರವಾಗಿ ಮುಟ್ಟುತ್ತಿ ರುವ ವಿಷಯವೂ ಆಗುತ್ತಿದೆ. ಈ ಚಿಂತನೆಗಳು ಕೇವಲ ಯುವ ವರ್ಗಕ್ಕೆ ಮಾತ್ರ ಸೀಮಿತವಾದ ವಿಷಯವೂ ಅಲ್ಲ. ಯಾವುದನ್ನು ಇಂದು ನಗರೀಯ ಎಂದು ಕರೆಯಲಾಗುತ್ತದೋ ಆ ವರ್ಗ ‘ನಮ್ಮ ಸುಖ’ ಎಂಬ ಚಿಂತನೆಗೆ ಹತ್ತಿರವಾದಂತೆನಿಸುತ್ತಿದೆ. ಪ.ಪೂ. ಗುರೂಜಿಯವರು ಆ ಕಾಲಖಂಡದಲ್ಲೂ ಇದರ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಪರ್ವಿಸೀನೆಸ್ ಸಮಾಜ ಬೇಕೆ ಎಂಬುದನ್ನು ಅವರು ಚರ್ಚೆ ಮಾಡಿದ್ದಾರೆ. ಈ ಸ್ಪರ್ಧಾತ್ಮಕ, ಕೆರಿಯರ್ ಪ್ರಧಾನವಾದ ಜಗತ್ತು ಮತ್ತು ಜಗತ್ತಿನ ದೊಡ್ಡಣ್ಣನ ಸ್ಥಾನಕ್ಕಾಗಿ ನಡೆಯುವ ಪೈಪೋಟಿಗಳ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಕೇವಲ ಅವರದ್ದಲ್ಲ. ಅವೆಲ್ಲವೂ ಸನಾತನವಾದದ್ದೇ. ಅದಕ್ಕೇ ಗುರೂಜಿಯವರು ‘ಸುಖ’ ಎನ್ನುವುದು ನಮ್ಮೊಳಗೇ ಇದೆ. ಅದನ್ನು ಯಾವುದಾರೊಂದು ರೀತಿ ನಿಮಿತ್ತ ಮಾಡಿಕೊಂಡು ಅನುಭವಿಸುತ್ತೇವೆ. ಹೊರಗಿನ ವಸ್ತುವಿನಲ್ಲಿ ಸುಖವಿಲ್ಲ. ಅದು ನಿಮಿತ್ತ ಮಾತ್ರ’ ಎನ್ನುತ್ತಾರೆ. ಈ ವೋಕಿಸಂ, ಅಲ್ಟಾಲಿಬರಲ್ ಗಳಲ್ಲಿ ನನ್ನ ಸುಖ ಎಂಬುದಕ್ಕೆ ಮಾತ್ರ ಪ್ರಾಮುಖ್ಯತೆ. ಗುರೂಜಿಯವರ ಪ್ರಕಾರ ಮನುಷ್ಯ ಹೀಗಿರಲು ಸಾಧ್ಯವಿಲ್ಲ. ಸಮುದಾಯದ ಜೊತೆಗೆ ಬೆಳೆಯುವ ವ್ಯಕ್ತಿಯಲ್ಲಿ ಇದು ಕೂಡದು ಎಂಬುದು ಅವರ ಅಭಿಪ್ರಾಯ. ಅದನ್ನು ಅವರು ಹಲವಾರು ಭಾಷಣಗಳಲ್ಲಿ ಹೇಳಿದ್ದಾರೆ ಮತ್ತು ನಂತರ ಬಂದ ಗುರೂಜಿ ಸಮಗ್ರದಲ್ಲಿ ಪ್ರಕಟವೂ ಆಗಿದೆ. ನಾನು ಹೀಗೆಯೇ ಎಂಬುದರ ಬದಲಾಗಿ ಸಮಾಜದಂತೆ ನಾನು, ಸಮಾಜ ಇದ್ದಂತೆ ನಾನು ಎಂಬ ಹೊಂದಾಣಿಕೆ ಬಹುಮುಖ್ಯ ಎಂಬುದನ್ನು ಅವರು ದಾಖಲಿಸಿದ್ದಾರೆ.
ಗುರೂಜಿಯವರ ಈ ಸುಖದ ಕಲ್ಪನೆಯನ್ನು ನಂತರ ದತ್ತೋಪಂಥ ಠೇಂಗಡಿಯವರು ಮುಂದುವರಿಸಿದರು. ಅವರು ತಮ್ಮ ಕಾರ್ಯಕರ್ತ ಎಂಬ ಪುಸ್ತಕದಲ್ಲಿ ಸುಖದ ಕಲ್ಪನೆಯನ್ನು ಭಾರತೀಯ ಮತ್ತು ಪಾಶ್ಚಾತ್ಯ ದೃಷ್ಟಿಕೋನಗಳಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಭಾರತೀಯ ಪರಿಕಲ್ಪನೆಯ ಸುಖದಲ್ಲಿ ಸುಖ ಎಂದರೆ ಕೇವಲ ಇಂದ್ರಿಯ ಸುಖವಲ್ಲ, ಮನಸ್ಸಿಗೆ, ಬುದ್ದಿಗೆ ಸೀಮಿತವಾದುದೂ ಅಲ್ಲ. ಅದಕ್ಕಿಂತಲೂ ಮೀರಿದ್ದು. ಠೇಂಗಡಿಯವರು ಅದನ್ನು ಒಂದು ಘಟನೆಯ ಮೂಲಕ ಹೀಗೆ ವಿವರಿಸುತ್ತಾರೆ. ಮಗುವೊಂದು ಚರಂಡಿಯಲ್ಲಿ ಬಿದ್ದಿತ್ತು. ಜನ ನಿಂತು ನೋಡುತ್ತಿದ್ದರು. ಮಗು ವಾಪಾಸು ಬರುತ್ತೋ ಇಲ್ಲವೋ ಎಂದು ಎಲ್ಲರೂ ಯೋಚಿಸುತ್ತಿದ್ದಾಗ ಅಲ್ಲೇ ಇದ್ದ ಸಾಮಾನ್ಯ ಕೆಲಸಗಾರನೊಬ್ಬ ಆ ಕೊಳಚೆಗೆ ಧುಮುಕಿ ಆ ಮಗುವನ್ನು ಬದುಕಿಸಿದ. ಅವನು ಯಾಕೆ ಆ ರೀತಿ ಮಾಡಿದ ಎಂದರೆ ಆತನಿಗೆ ಅದರಲ್ಲಿ ಆತ್ಮಸುಖ ಸಿಗುತ್ತಿತ್ತು! ಇಂಥ ಅನೇಕ ಉದಾಹರಣೆಗಳನ್ನು ಠೇಂಗಡಿಯವರು ಕೊಡುತ್ತಾರೆ. ಚರ್ಚಿನ ಪಾದ್ರಿಗಳನ್ನೊಮ್ಮೆ ಬಿಷಪರು ಪ್ರಶ್ನಿಸಿ, ರೋಗರುಜಿನಗಳೇ ತುಂಬಿದ್ದ ದ್ವೀಪವೊಂದಕ್ಕೆ ಯಾರು ಹೋಗುವಿರಿ ಎಂದಾಗ ಎಲ್ಲರೂ ಹಿಂಜರಿದರಂತೆ. ಆಗ ಒಬ್ಬ ಪಾದ್ರಿ ತಾನು ಹೋಗುವೆ ಎಂದು ಮುಂದೆ ಬಂದನಂತೆ. ಆತನಿಗೆ ತಾನು ಅಲ್ಲಿಗೆ ಹೋಗಬೇಕೆಂಬ ಮನಸ್ಸು ಏಕೆ ಬಂತೆಂದರೆ ಆತನಿಗೆ ಅದರಲ್ಲಿ ಆತ್ಮತೃಪ್ತಿ ಸಿಗುತ್ತಿತ್ತು. ಇದುವೆ ಸುಖ ಎನ್ನುವುದು ಠೇಂಗಡಿಯವರ ಅಭಿಪ್ರಾಯ.


ಪಾಶ್ಚಾತ್ಯದ ಸುಖದ ಕಲ್ಪನೆ ಮತ್ತು ಭಾರತೀಯ ಕಲ್ಪನೆಗೂ ಇರುವ ವ್ಯತ್ಯಾಸ ಇಂಥದ್ದು. ಪಾಶ್ಚಾತ್ಯರ ವೋಕ್-ಅಲ್ಫಾ ಲಿಬರಲ್ ಸುಖದ ಕಲ್ಪನೆಯನ್ನು ವ್ಯತ್ಯಾಸ ಮಾಡಿಕೊಳ್ಳಲು ನಮ್ಮ ಚಿಂತನೆ ಅತ್ಯಂತ ಪ್ರಸ್ತುತವಾದದ್ದು ಎಂಬುದು ಗುರೂಜಿಯವರ ಅಭಿಪ್ರಾಯ. ಆ ಹಿನ್ನೆಲೆಯಲ್ಲಿ ಗುರೂಜಿಯವರು ಒಂದು ಕಡೆ ‘ಥಿಂಕಿಂಗ್ ಮೋರ್ ಅಂಡ್ ಮೋರ್ ಅಬೌಟ್ ಅಧ್ಯಾತ್ಮ’ ಎನ್ನುತ್ತಾರೆ. ನಮ್ಮ ಸುಖದ ಕಲ್ಪನೆಯನ್ನು ಹೆಚ್ಚು ಮಾಡಿಕೊಳ್ಳುವುದು ಹೇಗೆಂದರೆ ಜಗತ್ತಿನ ಬೇರೆಯವರ ಜೊತೆಗೂ ನಾವಿದ್ದೇವೆ ಎನ್ನುವ ಪರಿಜ್ಞಾನ, ಅದಿದ್ದಾಗ ಬೇರೆಯವರು ಹೇಗೆ ಬೇಕಾದರೂ ಇರಲಿ, ನಾನು ಅದರಂತೆ ಇರುವೆ ಎನ್ನುವ ಮಾನಸಿಕತೆಯಿಂದ ಹೊರಗೆ ಬರಬಹುದು. ಅಷ್ಟಕ್ಕೆ ಸುಖದ ಕಲ್ಪನೆಯೇನೂ ಭಾರತದ ಆಸ್ತಿಯೇನಲ್ಲ, ಅನೇಕ ಪಾಶ್ಚಾತ್ಯ ಚಿಂತನೆಗಳಲ್ಲಿಯೂ ಸುಖದ ಬಗೆಗಿನ ಅನೇಕ ಆದರ್ಶಮಯವಾದ ವ್ಯಾಖ್ಯಾನಗಳನ್ನು ನೀಡಿದವರು, ದಾರಿ ತೋರಿದವರಿದ್ದಾರೆ.

ಒಮ್ಮೆ ಹೊಸದಾಗಿ ಬಂದ ಪ್ರಚಾರಕನೊಬ್ಬ ಗುರೂಜಿಯವರ ಮುಂದೆ ನಿಂತು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಆಗ ಗುರೂಜಿಯವರು “ನೀನು ಏನೇನನ್ನು ಬಿಟ್ಟು ಬಂದೆ?” ಎಂದು ಕೇಳುತ್ತಾರೆ. ಆತ, “ನಾನು ನನ್ನ ಪ್ರೀತಿಪಾತ್ರರಾದ ಮನೆಮಂದಿಯನ್ನು ಬಿಟ್ಟುಬಂದೆ” ಎನ್ನುತ್ತಾನೆ. ಗುರೂಜಿಯವರು “ಇನ್ನೇನನ್ನು ಬಿಟ್ಟು ಬಂದೆ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆತ, “ನಾನು ಕೆಲಸ, ಸಂಬಳವನ್ನು ಬಿಟ್ಟು ಬಂದೆ” ಎನ್ನುತ್ತಾನೆ. ಗುರೂಜಿಯವರು, ”ನೀನು ನಿನ್ನ ಆನಂದ-ಸುಖ ಎಲ್ಲವನ್ನೂ ಬಿಟ್ಟು ಬಂದಿದ್ದೀಯಾ?” ಎಂದು ಮೂರನೆ ಪ್ರಶ್ನೆಯನ್ನು ಕೇಳುತ್ತಾರೆ. ಆಗ ಆತ ಒಮ್ಮೆ “ಹಾಂ” ಎಂದರೂ ಸಾವರಿಸಿಕೊಂಡು ‘ಇಲ್ಲ, ನನಗೆ ಈ ಕೆಲಸದಲ್ಲೇ ಆನಂದ ಇದೆ” ಎನ್ನುತ್ತಾನೆ. ಆಗ ಗುರೂಜಿಯವರು ಆತನಿಗೆ ಸುಖದ ಕಲ್ಪನೆಯನ್ನು ಹೇಳುತ್ತಾ, “ಈ ಆನಂದ ಎನ್ನುವುದು ಕೆಲವನ್ನು ಬಿಟ್ಟುಬಂದಾಗಲೂ ಆಗುತ್ತವೆ” ಎನ್ನುವುದನ್ನು ವಿವರಿಸಿದ್ದರು! ಇದನ್ನು ಅಳವಡಿಸಿಕೊಂಡರೆ ಇಂದಿನ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.


ಗುರೂಜಿಯವರು ವ್ಯಕ್ತಪಡಿಸಿದ ಇನ್ನೊಂದು ಮಹತ್ವ ಪೂರ್ಣ ವಿಷಯವೆಂದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು. ಎಲ್ಲೋ ಹುಟ್ಟಿದ ತಂತ್ರಜ್ಞಾನ ನಾಳೆ ನಮ್ಮ ಮನೆಬಾಗಿಲಿಗೆ ಬಂದೇ ಬರುತ್ತದೆ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. The Third Wave ಎನ್ನುವ ಪುಸ್ತಕ ಬರೆದ ಅಲ್ವಿನ್ ಟಾಲ್ಟರ್ ಎನ್ನುವ ಚಿಂತಕ ಕೂಡ ಇದೇ ವಿಷಯವನ್ನು ಹೇಳಿದ್ದಾನೆ. ತಂತ್ರಜ್ಞಾನದ ವೇಗವನ್ನು ಯಾರಿಂದಲೂ ಕಟ್ಟಿಹಾಕಲು ಸಾಧ್ಯವಿಲ್ಲ. ಕೆಲವು ವರ್ಷಗಳ ಮುಂಚೆ ಬೆಂಗಳೂರಿನ ದೊಡ್ಡ ಕಂಪನಿಯೊಂದರ ಮುಖ್ಯಸ್ಥರು ಮಾತಾಡುತ್ತಾ, ”ನನ್ನ ಇಬ್ಬರು ಮಕ್ಕಳು ಮೂರು ಸ್ಟೀನ್ಗಳ (ಟಿವಿ, ಕಂಪ್ಯೂಟರ್ ಮತ್ತು ಮೊಬೈಲ್ ಸ್ಟೀನ್ಗಳು) ನಡುವೆ ಕಳೆದು ಹೋಗಿದ್ದಾರೆ” ಎಂದು ಹೇಳಿದರು. ಈಗ ಅದಕ್ಕಿಂತ ಜಗತ್ತು ಮುಂದೆ ಬಂದುಬಿಟ್ಟಿದೆ. ಕೃತಕ ಬುದ್ದಿಮತ್ತೆ, ಮೆಟಾವರ್ಸ್ ಮುಂತಾದವುಗಳು ಬಂದಿವೆ. ಇವುಗಳ ಹುಟ್ಟು ಎಲ್ಲೇ ಆಗಿರಬಹುದು, ಆದರೆ ಅದಿಂದು ನಮ್ಮ ಮನೆಯೊಳಗೆ ಮತ್ತು ಜೇಬಿನೊಳಗೇ ಬಂದಿದೆ. ಗುರೂಜಿಯವರ ಕಾಲದಲ್ಲಿ ಇಂಥ ವೇಗ ಇಲ್ಲದಿದ್ದರೂ ಕೂಡ ತಂತ್ರಜ್ಞಾನದ ಬಗ್ಗೆ ಅವರು ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ತಳಹದಿ ಧರ್ಮದೃಷ್ಟಿಯದ್ದಾಗಬೇಕು ಎಂದು ಗುರೂಜಿಯವರು ಹೇಳಿದ್ದರು.


ಅದಕ್ಕೆ ಒಂದು ಸಂತುಲತೆ ಬೇಕಾಗಿದೆ ಎಂದಿದ್ದರು. ಇದು ಹೇಗೆಂದರೆ ಇಂದು ಕ್ರಿಪ್ಟೋ ಕರೆನ್ಸಿಯ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ, ಆದರೆ ಅದರ ದುಷ್ಪರಿಣಾಮಗಳನ್ನು ತಡೆಯಬಹುದು. FTX ನಡೆಸುವಾತನಿಗೆ ಧರ್ಮದೃಷ್ಟಿ ಇದ್ದರೆ ಅದು ಉಪಯೋಗಿಯಾಗುತ್ತದೆ. ಇಲ್ಲದಿದ್ದರೆ ಅದು ಅಲ್ಲಾವುದ್ದೀನನ ದ್ವೀಪದಂತೆ, ಅದನ್ನು ಕಟ್ಟಿಹಾಕುವುದು ಕಷ್ಟ. ಅಪಾಯಗಳೇ ಸಂಭವಿಸುತ್ತವೆ. ಈ ಅಪಾಯವನ್ನು ನಿಯಂತ್ರಿಸುವುದೇ ಧರ್ಮದೃಷ್ಟಿ, ಯಾವುದು ಧರ್ಮದ ವ್ಯಾಪ್ತಿಗೆ ಹೊಂದುವುದಿಲ್ಲವೋ ಅಂಥ ವಿಜ್ಞಾನದ ಅಗತ್ಯವಿಲ್ಲ ಎನ್ನುವುದು ಗುರೂಜಿಯವರ ಅಭಿಪ್ರಾಯ.
ಈ ವಿಚಾರವನ್ನು ಇಂದಿನ ತಂತ್ರಜ್ಞಾನದ ಕಾಲದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಇಂದು ತಂತ್ರಜ್ಞಾನ ನಮ್ಮೆಲ್ಲರನ್ನು ಪ್ರಭಾವಿಸುತ್ತಿದೆ. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಅದನ್ನು ಗುರೂಜಿಯವರ ಚಿಂತನೆಯ ಆಧಾರದಲ್ಲಿ ನೋಡಬಹುದಾದರೆ ಸಮಾಜವು ಧಾರ್ಮಿಕ ದೃಷ್ಟಿಯನ್ನು ಹೊಂದಿದ್ದರೆ ಪ್ರಸ್ತುತ ಪರಿಸ್ಥಿತಿಗೆ ಪರಿಹಾರವಾಗಬಹುದು. ಮುಂದೆ ತಂತ್ರಜ್ಞಾನ ಇನ್ನೂ ಬೆಳೆಯಬಲ್ಲದು, ಆದರೆ ಈ ದೃಷ್ಟಿ ಶಾಶ್ವತ. ಸಮಾಜದಲ್ಲಿ ಇದಕ್ಕೆ ಪ್ರಾಮುಖ್ಯತೆ ಸಿಗುವಂತಾಗಬೇಕು. ಧರ್ಮಾಧಿಷ್ಟಿತ ಸಮಾಜ ನಿರ್ಮಾಣವಾದರೆ ನಾವು ಅತಿರೇಕ ಎಂದು ಭಾವಿಸುವ ತಂತ್ರಜ್ಞಾನದಿಂದ ನಮಗೆ ಅಪಾಯಗಳು ತಪ್ಪಿ ಉಪಯೋಗಿಯೇ ಆಗಬಹುದು. ಇಂಥದ್ದೇ ಅಭಿಪ್ರಾಯಗಳನ್ನು ಇತ್ತೀಚೆಗೆ ಬಿಡುಗಡೆಯಾದ ರೋಹಿಣಿ ನೀಲೇಕಣಿಯವರ ಪುಸ್ತಕ Samaaj, Sarkaar, Bazaar: a citizen-first approach ವಿವರಿಸುತ್ತದೆ. ಗುರೂಜಿಯವರ ಚಿಂತನೆಗಳು ಇದಕ್ಕೆ ಹೋಲಿಕೆಯಾಗುವುದರಿಂದ ಇದರ ಉಲ್ಲೇಖ ಇಲ್ಲಿ ಪ್ರಸ್ತುತವಾಗಿದೆ. ಈ ಮೊದಲೇ ಅಂದಂತೆ ಇಂಥ ಚಿಂತನೆಗಳು ಭಾರತದಲ್ಲಿ ಹೊಸದಲ್ಲ. ರೋಹಿಣಿ ನೀಲೇಕಣಿಯವರೆನ್ನುವಂತೆ, ಒಂದು ಕಾಲದಲ್ಲಿ ಜಗತ್ತಿನಲ್ಲಿ ಸಮಾಜ ಉನ್ನತ ಶ್ರೇಣಿಯಲ್ಲಿದ್ದು ಎರಡನೆಯ ಶ್ರೇಣಿಯಲ್ಲಿ ಸರ್ಕಾರ ಅಥವಾ ಪ್ರಭುತ್ವ, ಅದರ ಕೆಳಗೆ ಮಾರುಕಟ್ಟೆ ಇದ್ದಾಗ ಎಲ್ಲವೂ ಸರಿಯಾಗಿತ್ತು. ಆದರೆ ಕಾಲಕ್ರಮೇಣ, ವಿವಿಧ ಕಾರಣಗಳಿಂದ ಮಾರುಕಟ್ಟೆ ಉನ್ನತ ಶ್ರೇಣಿಗೆ ಏರಿ, ಅದರ ಕೆಳಗೆ ಪ್ರಭುತ್ವ ಸ್ಥಾಪನೆಯಾಗಿ, ಸಮಾಜ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅದರಿಂದ ಪರಿಸ್ಥಿತಿ ಹದಗೆಟ್ಟಿದೆ! ಇದು ಅಸಂತುಲತೆ. ಅದಕ್ಕೆ ಧರ್ಮಾಧಾರಿತ ಸಮಾಜ ರಚನೆಯೊಂದೇ ಪರಿಹಾರ.


ಮಾಹಿತಿಯ ಕಣಜವಲ್ಲ, ಸಂಸ್ಕಾರದ ಖಜಾನೆ: ಗುರೂಜಿಯವರ ಪ್ರಸ್ತುತತೆಯ ಮೂರನೇ ಮುಖ್ಯ ವಿಷಯ ಶಿಕ್ಷಣ. ಇಂದು ಹೊಸ ಶಿಕ್ಷಣ ನೀತಿ ಜಾರಿಯಾಗಿದೆ. ಅದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಗುರೂಜಿಯವರು ಶಿಕ್ಷಣದ ಬಗ್ಗೆ, ಶಿಕ್ಷಣ ನೀಡುವವನ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತು ಒಟ್ಟು ಶಿಕ್ಷಣ ವ್ಯವಸ್ಥೆಯ ಬಗೆಗಿನ ಅಭಿಪ್ರಾಯಗಳನ್ನು ನೋಡಿದರೆ ಇಂದಿನ ಪ್ಯೂಚರ್ ಆಫ್ ಎಜುಕೇಶನ್ಗೆ ಅತ್ಯಂತ ಪ್ರಸ್ತುತವಾದಂಥ ಚಿಂತನೆಗಳನ್ನು ಕೊಟ್ಟಿದ್ದಾರೆ. ಇವೆಲ್ಲವೂ ಕೂಡ ಅತ್ಯಂತ ಶಾಶ್ವತವಾದ ಮತ್ತು ಸನಾತನವಾದ ದೃಷ್ಟಿಗಳು. ಏಕೆಂದರೆ ಇಂದು ಹೊಸ ಶಿಕ್ಷಣ ನೀತಿ ಬಂದಿದೆ, ನಾಳೆ ಇನ್ನೊಂದು ಬರಬಹುದು. ಶಿಕ್ಷಣ ಹಲವು ಸ್ತರಗಳಲ್ಲಿರಬಹುದು. ಆದರೆ ಶಿಕ್ಷಣದ ಭವಿಷ್ಯದ ಬಗ್ಗೆ ಅವರು ನೀಡಿದ ಚಿಂತನೆಗಳು ಶಾಶ್ವತವಾದವುಗಳು. ಇಂಥದ್ದೇ ಚಿಂತನೆಗಳನ್ನು ಪ್ರೊ. ಎಂ. ಹಿರಿಯಣ್ಣನವರಂಥ ವಿದ್ವಾಂಸರು ತಮ್ಮದೊಂದು ಪುಸ್ತಕದಲ್ಲಿ,’ Education is not only to inform the mind, but to form the mind, ಮನಸ್ಸನ್ನು ರೂಪಿಸುವಂಥದ್ದು ಶಿಕ್ಷಣವಾಗಬೇಕು’ ಎನ್ನುತ್ತಾರೆ. ಗುರೂಜಿಯವರು ಇಂಥದ್ದೇ ವಿಷಯಗಳನ್ನು ಬೇರೆ ಪದಗಳ ಮೂಲಕ, ವಾಕ್ಯಗಳ ಮೂಲಕ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ನೀವು ಎಂಥವರನ್ನು ತಯಾರು ಮಾಡುತ್ತಿದ್ದೀರಿ ಎನ್ನುವುದು ಬಹಳ ಮುಖ್ಯ ಎನ್ನುವುದು ಗುರೂಜಿಯವರ ದೃಷ್ಟಿ, ಶಿಕ್ಷಣ ಎನ್ನುವುದು ಶಾಲಾ ಶಿಕ್ಷಣಕ್ಕೆ ಮಾತ್ರ ಸಂಬಂಧಪಟ್ಟದ್ದಲ್ಲ. ಕುಟುಂಬದಲ್ಲಿ, ಅವನು ಬದುಕಿರುವ ಸಮುದಾಯದಲ್ಲಿ ಯಾವ ಯಾವ ಶಿಕ್ಷಣ ಸಿಗುತ್ತಿದೆ ಎನ್ನುವುದು ಮುಖ್ಯ. ಇವೆಲ್ಲವೂ ಸೇರಿ ಶಿಕ್ಷಣ. I have never let my schooling to interfere with my education ಎಂಬ ಮಾರ್ಕ್ ಟ್ಟೈನ್ನ ಹೆಸರಾಂತ ಹೇಳಿಕೆ ಕೂಡ ಹೀಗೆಯೇ ಇದೆ. ಇದಕ್ಕೂ ಮುಂದುವರಿದು ರಿಚರ್ಡ್ ಫೇಮ್ಯಾನ್ ಎಂಬ ಹೆಸರಾಂತ ವಿಜ್ಞಾನಿ intelligence is entirely different from education ಎನ್ನುತ್ತಾನೆ. ಅಂದರೆ ಶಾಲೆ, ಶಿಕ್ಷಣ ಎನ್ನುವುದು ಬುದ್ದಿಮತ್ತೆಗಿಂತಲೂ ಭಿನ್ನವಾದದ್ದು. ಇದು ಗುರೂಜಿಯವರ ಅಭಿಪ್ರಾಯ ಕೂಡ. ಅನೇಕ ಬಾರಿ ನಾವು ಇವೆಲ್ಲವನ್ನೂ ಒಟ್ಟಾಗಿ ಅಳೆದುಬಿಡುತ್ತೇವೆ. ಆದರೆ ಗುರೂಜಿಯವರು ಧರ್ಮದ ಹತ್ತು ಲಕ್ಷಣದ ಬಗ್ಗೆ ಯೋಚನೆಯನ್ನು ಮಾಡುತ್ತಾರೆ. ಸೂಕ್ತವಾದ బుద్ధి ಮತ್ತು ಸೂಕ್ತವಾದ ಮನಸ್ಸನ್ನು ನಾವು ನಿರ್ಮಾಣ ಮಾಡುತ್ತಿದ್ದೇವಾ ಎಂದು ಗುರೂಜಿ ಚಿಂತಿಸುತ್ತಾರೆ.


ಗುರೂಜಿಯವರೊಮ್ಮೆ ಒಂದು ಶಾಲೆಗೆ ಹೋಗಿರುತ್ತಾರೆ. ಅಲ್ಲಿ ನೇತುಹಾಕಿದ್ದ ಪಾಶ್ಚಾತ್ಯ ಶಿಕ್ಷಣಕ್ಕೆ ಸಂಬಂಧಿಸಿದ ಚಿತ್ರಪಟಗಳನ್ನು ನೋಡಿದ ಗುರೂಜಿ ಶಿಕ್ಷಕರಲ್ಲಿ, “ಮಕ್ಕಳಿಗೆ ನೀವು ಏನೇನು ಕಲಿಸುತ್ತಿದ್ದೀರಿ?” ಎಂದು ಪ್ರಶ್ನಿಸುತ್ತಾರೆ. ಅವರು ಕೊಟ್ಟ ಯಾವ ಉತ್ತರಗಳೂ ಗುರೂಜಿಯವರಿಗೆ ಸಮಾಧಾನವಾಗಿರಲಿಲ್ಲ. ಏಕೆಂದರೆ ಸನಾತನ ಪರಂಪರೆಯ, ಧರ್ಮದ ಲಕ್ಷಣಗಳು ಅಲ್ಲಿ ಅವರಿಗೆ ಕಂಡಿರಲಿಲ್ಲ. ಸತ್ಯ, ಅಹಿಂಸೆ ಮುಂತಾದ ಲಕ್ಷಣಗಳಿಲ್ಲದೆ ಶಿಕ್ಷಣ ಅಪೂರ್ಣ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆ ಘಟನೆಯನ್ನು ಉಲ್ಲೇಖಿಸುತ್ತಾ ಅವರು ಒಂದು ಭಾಷಣದಲ್ಲಿ ಪ್ರಸ್ತಾಪ ಮಾಡುತ್ತಾರೆ. ಅದರಲ್ಲಿ ಅವರು ಖ್ಯಾತವಾದ ‘ಸತ್ಯಕಾಮ ಜಾಬಾಲಿ’ಯ ಪ್ರಸಂಗವನ್ನು ಉಲ್ಲೇಖಿಸುತ್ತಾರೆ.
ಶಿಕ್ಷಣವನ್ನು ಅರಸಿ ಜಾಬಾಲಿ ಎಂಬ ವಿದ್ಯಾರ್ಥಿ ಒಬ್ಬರು ಗುರುಗಳತ್ತ ಹೋಗುತ್ತಾನೆ. ಅಲ್ಲಿ ಆತನಿಗೆ ಗುರುಗಳು, “ನೀನು ಯಾವ ಕುಲಕ್ಕೆ ಸೇರಿದವನು?” ಎಂದು ಪ್ರಶ್ನಿಸುತ್ತಾರೆ. ಜಾಬಾಲಿಗೆ ತನ್ನ ಕುಲ ತಿಳಿದಿರಲಿಲ್ಲ. ಆತ ತನ್ನ ತಾಯಿಯನ್ನು ಕೇಳುತ್ತಾನೆ. ತಾಯಿ ಆತನಿಗೆ, ”ನನಗೂ ಕೂಡ ಸರಿಯಾಗಿ ಗೊತ್ತಿಲ್ಲ, ನಾನು ಹಲವರಲ್ಲಿ ದಾಸಿಯಾಗಿದ್ದೆ. ಹಾಗೆ ನಿನ್ನ ತಂದೆ ಯಾರೆಂದು ಗೊತ್ತಿಲ್ಲ” ಎನ್ನುತ್ತಾಳೆ. ವಿದ್ಯಾರ್ಥಿ ಜಾಬಾಲಿ ಅದನ್ನೇ ಗುರುಗಳ ಬಗ್ಗೆ ಹೇಳುತ್ತಾನೆ. ಆಗ ಗುರುಗಳು “ನಾನು ಯಾವುದನ್ನು ಕಲಿಸಿಕೊಡಬೇಕಾಗಿತ್ತೋ ಅದನ್ನು ನೀನಾಗಲೇ ಕಲಿತುಬಿಟ್ಟಿದ್ದೀಯ, ನೀನು ಶಿಷ್ಯನಾಗಿರು” ಎಂದು ಆತನನ್ನು ಗುರುಕುಲಕ್ಕೆ ಸೇರಿಸಿಕೊಳ್ಳುತ್ತಾರೆ. ಈ ಘಟನೆಯನ್ನು ಹೇಳುತ್ತಾ ಶಿಕ್ಷಣದ ಬಗ್ಗೆ ನಮ್ಮ ದೃಷ್ಟಿಕೋನ ಏನಿರಬೇಕೆಂದು ಹೇಳುತ್ತಾರೆ. ಯಾವುದನ್ನು ನಂಬಿಕೊಂಡು ಬಾಳಬೇಕು ಮತ್ತು ಆ ಗುಣ ಶಿಕ್ಷಣ ಪಡೆದವನಲ್ಲಿ ಎಷ್ಟಿರುತ್ತದೆ ಎಂಬುದು ಮುಖ್ಯ ಎನ್ನುವುದರ ಮೇಲೆ ಸಮಾಜದ ಭವಿಷ್ಯ ನಿಂತಿದೆ ಎನ್ನುವುದು ಗುರೂಜಿಯವರ ಅಭಿಪ್ರಾಯ. ಇಂತಹ ಅವರ ಚಿಂತನೆಗಳನ್ನುGURUJI-VISION AND MISSION ಪುಸ್ತಕದಲ್ಲಿ ಶಿಕ್ಷಕನ ಪಾತ್ರ ಎಂಬ ಅಧ್ಯಾಯದ ಮೂಲಕ ಬಹಳ ಅರ್ಥಪೂರ್ಣವಾಗಿ ವಿವರಿಸಲಾಗಿದೆ. ಈ ಚಿಂತನೆಗಳು ಇಂದಿನ ಕಾಲಖಂಡಕ್ಕೆ ಅಂದರೆ ಮಾಹಿತಿ ಯುಗಕ್ಕೆ ಅತ್ಯಂತ ಪ್ರಸ್ತುತವಾಗಿದೆ.


ರಾಷ್ಟ್ರೀಯತೆಯಲ್ಲಿ ಸಂಕುಚಿತತೆಯಿಲ್ಲ: ಪ್ರಸ್ತುತ ಅತಿ ಮುಖ್ಯ ಎನಿಸುವ ವಿಷಯವೆಂದರೆ ಜಾಗತಿಕ ರಂಗದಲ್ಲಿ ಭಾರತದ ಪಾತ್ರದ ಕುರಿತಾದುದು. ಗುರೂಜಿಯವರ ಚಿಂತನೆಗಳು ವ್ಯಕ್ತವಾಗಿರುವ ಕನ್ನಡದ ‘ಚಿಂತನ ಗಂಗಾ’ದಲ್ಲಿ ‘ನಮ್ಮ ಜಾಗತಿಕ ಧ್ಯೇಯ’ ಎಂಬ ಆರಂಭದ ಅಧ್ಯಾಯದಲ್ಲೇ ಇದರ ಬಗ್ಗೆ ವಿಸ್ತ್ರತವಾದ ವಿಷಯಗಳಿವೆ. ಅಲ್ಲದೆ ಗುರೂಜಿ ಸಮಗ್ರದಲ್ಲೂ ಈ ವಿಚಾರ ಅಲ್ಲಲ್ಲಿ ಪ್ರಸ್ತಾಪವಾಗಿವೆ. ಇದನ್ನೂ ಕೂಡ ಗುರೂಜಿಯವರು ಹೊಸದಾಗೇನೂ ಸೃಷ್ಟಿಮಾಡಿರಲಿಲ್ಲ. ಅವೂ ಕೂಡ ನಮ್ಮ ಪರಂಪರೆಯಲ್ಲಿದ್ದವೇ.
ನಾವು ಪದೇಪದೇ ಕೇಳಿರುವ ಕೃಣ್ವಂತೋ ವಿಶ್ವಮಾರ್ಯಂ, ವಸುಧೈವ ಕುಟುಂಬಕಂ ಮುಂತಾದ ಚರ್ಚೆಗಳಲ್ಲಿ ಈ ವಿಷಯಗಳು ಅಡಕವಾಗಿವೆ. ಇಂದು ವಿಶ್ವದಲ್ಲಿ ರಾಷ್ಟ್ರೀಯತೆಯ ಕುರಿತ ಚರ್ಚೆ ತುಂಬಾ ನಡೆಯುತ್ತಿವೆ. ರಾಷ್ಟ್ರೀಯತೆಯನ್ನು ನ್ಯಾಶನಲಿಸಂ ಎಂದು ಅನುವಾದಿಸಿದರೂ ಅದರ ಅರ್ಥ ಒಂದೇ ಅಲ್ಲ. ಅದು ನೇರವಾಗಿ ಅನುವಾದವಾಗುವ ಶಬ್ದಗಳಲ್ಲ. ಅದನ್ನು ಭಾಷಣದ ಅನುಕೂಲಕ್ಕೆ ತಕ್ಕಂತೆ ನಾನಿಲ್ಲಿ ಬಳಸಿದ್ದೇನೆ.


ಗುರೂಜಿಯವರು ರಾಷ್ಟ್ರೀಯತೆಯ ವಿಷಯದಲ್ಲಿ ಅತ್ಯಂತ ಸ್ಪಷ್ಟವಾದ ಮತ್ತು ದೀರ್ಘವಾದ ವ್ಯಾಖ್ಯಾನವನ್ನು ನೀಡುತ್ತಲೇ ಬಂದವರು. ಸಂಘದ ಕಾರ್ಯ ಕೂಡ ಸಮಾಜದ ಸಾಮಾನ್ಯರ ಮಧ್ಯದಲ್ಲಿ ದೇಶಭಕ್ತಿ, ಹೊಣೆ, ಸಮಾಜಕ್ಕಾಗಿ ಬಾಳ್ವೆ, ವಿಸ್ಕೃತಿ ನಿವಾರಣೆಗಳಾದ್ದರಿಂದ, ಇವೆಲ್ಲಕ್ಕೂ ರಾಷ್ಟ್ರವೇ ಆಧಾರವಾಗಿರುವುದರಿಂದ ಮತ್ತು ಡಾ. ಹೆಡಗೇವಾರ್, ಅರವಿಂದರು ಹಾಗೂ ಇನ್ನಿತರರ ಅಭಿಪ್ರಾಯಗಳು ಕೂಡ ಅವುಗಳೇ ಆದುದರಿಂದ ಗುರೂಜಿಯವರು ಬಹಳ ವಿಸ್ತ್ರತವಾಗಿ ಚರ್ಚೆ ಮಾಡಿದ್ದಾರೆ. ಪಾಶ್ಚಾತ್ಯ ಜಗತ್ತಿನಲ್ಲಿ ನ್ಯಾಶನಲಿಸಂ ಎಂಬುದು ನಕಾರಾತ್ಮಕವಾಗಿ ಚಿತ್ರಣಗೊಂಡ ಹೊತ್ತಿನಲ್ಲಿ ಅದರ ಬಗ್ಗೆ ಅತ್ಯಂತ ಸ್ಪಷ್ಟತೆಯನ್ನು ಗುರೂಜಿ ಹೊಂದಿದ್ದರು. ಹಿಟ್ಲರ್ ಮಾಡಿದ ಉಪಧ್ವಾಪಗಳ ಕಾರಣದಿಂದ ರಾಷ್ಟ್ರೀಯತೆಯನ್ನು ಸಂಕುಚಿತ, ಅಪಾಯಕಾರಿ ಎನ್ನುವ ಪಾಶ್ಚಾತ್ಯ ಚಿಂತನೆಗಳು ವ್ಯಾಪಕವಾಗಿದ್ದಾಗಲೂ ಅದು ನೆಲದ ಅಸ್ಮಿತೆ ಎಂದು ನೇರವಾಗಿ ಹೇಳಿದವರು ಗುರೂಜಿಯವರು. ಗುರೂಜಿ ಚಿಂತನೆಗಳಿಗೆ ಇಂದು ಪಾಶ್ಚಾತ್ಯ ಜಗತ್ತಿನಲ್ಲಿ ಮತ್ತೆ ಸ್ಥಾನ ಲಭಿಸುತ್ತಿದೆ. ಟ್ರಂಪ್ ಅಮೆರಿಕಾದ ಅಧ್ಯಕ್ಷನಾಗಿದ್ದಿರಬಹುದು, ಇಂಗ್ಲೆಂಡ್ ಬ್ರೆಕ್ಸಿಟ್ನಿಂದ ಹೊರನಡೆದ ಪ್ರಕರಣವಾಗಿರಬಹುದು, ಫ್ರಾನ್ಸ್ನಲ್ಲಿ ಲೀಪೆನ್ ಸ್ಥಾನ ಗಳಿಸಿದ್ದಿರಬಹುದು ಅಥವಾ ಇತ್ತೀಚೆಗೆ ಇಟಲಿಯಲ್ಲಾದ ಬದಲಾವಣೆಯಿರಬಹುದು. ಇವೆಲ್ಲವೂ ಅದಕ್ಕೆ ಸಾಕ್ಷಿಗಳು.

ಜಗತ್ತಿನಲ್ಲಿ ವಿಭಿನ್ನ ಗುಣಧರ್ಮಗಳನ್ನು ಹೊಂದಿರುವ ಸಮುದಾಯ ಬೇರೆಬೇರೆ ಕಡೆಗಳಲ್ಲಿವೆ. ಅವು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿವೆ ಎನ್ನುವುದರ ಬಗ್ಗೆ ಯೋಚನೆ ಮಾಡಬೇಕು ಎನ್ನುವುದು ಸಹಜವಾದುದು. ಅದು ವ್ಯಕ್ತಿಮಟ್ಟಕ್ಕಿಳಿಯುವಷ್ಟು ಸಂಕುಚಿತವೂ ಅಲ್ಲ, ಜಾಗತಿಕ ಮಟ್ಟಕ್ಕೆ ಹೋಗಿ ‘ಲಿಬರಲ್’ ಆಗಿರುವಷ್ಟು ದೊಡ್ಡದೂ ಅಲ್ಲ. ರಾಷ್ಟ್ರೀಯತೆಯೆಂಬುದು ಅವೆರಡರ ನಡುವಿನದು ಮತ್ತು ಅತ್ಯಂತ ವ್ಯಾವಹಾರಿಕವಾದ ಘಟಕ ಎಂಬುದನ್ನು ಸಮರ್ಥವಾಗಿ ಮಂಡಿಸಿದವರು ಗುರೂಜಿಯವರು. ಅದೊಂದು ಅಸ್ತಿತ್ವ, ತಮ್ಮ ಸಂಸ್ಕೃತಿ, ಐಡೆಂಟಿಟಿ ಮತ್ತು ಪರಂಪರೆಯ ವೈಶಾಲ್ಯವಿರುವ ಪ್ರಾಕ್ಟಿಕಲ್ ಸಂಗತಿ. ಗುರೂಜಿಯವರು ಹೇಳುವಂತೆ, ‘ನಾವು ಜಗತ್ತಿನ ಬಗ್ಗೆ ಯೋಚನೆ ಮಾಡಬೇಕು ಎಂದರೆ ರಾಷ್ಟ್ರೀಯತೆಯನ್ನು ಕಳೆದುಕೊಳ್ಳಬೇಕು ಎಂದೇನಿಲ್ಲ’.


ಇವತ್ತು ರಾಷ್ಟ್ರವನ್ನು ಸಂಕುಚಿತ ಎನ್ನುವವರು ಹಲವು ಪದಪುಂಜಗಳ ಮೂಲಕ ಅದನ್ನು ಯತ್ನಕ್ ನ್ಯಾಶನಲಿಸಂ, ಟೆಕ್ ನ್ಯಾಶನಲಿಸಂ, ಎಕನಾಮಿಕ್ ನ್ಯಾಶನಲಿಸಂ ಮುಂತಾದ ಶಬ್ದಗಳ ಮೂಲಕ ವಿವರಿಸುತ್ತಾರೆ. ಪಶ್ಚಿಮದ Nation-state ಕಲ್ಪನೆಯೆಂದರೆ ಒಂದಿಷ್ಟು ಮಂದಿ ಒಟ್ಟಿಗೆ ಸೇರಿ ಕೆಲವು ಕಾನೂನು ನಿಯಮಗಳ ವ್ಯಾಪ್ತಿಯಲ್ಲಿ ಬದುಕುವುದು ರಾಷ್ಟ್ರೀಯತೆ. ಅಂದರೆ ನಮಗೆ ಅನುಕೂಲವಾದ ರೀತಿಯಲ್ಲಿ ನಿಯಮಗಳನ್ನು ಮಾಡಿಕೊಳ್ಳುವುದು ಮಾತ್ರ ನ್ಯಾಶನಲಿಸಂ! ಅದಕ್ಕೆ ಬದ್ಧನಾಗಿರುವುದು ದೇಶಭಕ್ತಿ!
ನಮ್ಮದು ಆ ರೀತಿಯದ್ದಲ್ಲ. ಅದು ಭಾವನೆಗಳ ಆಧಾರದಲ್ಲಿ ಮತ್ತು ಜಗತ್ತಿನ ಒಳಿತಿಗಾಗಿ ಇರುವಂಥದ್ದು. ಕೃಣ್ವಂತೋ ವಿಶ್ವಮಾರ್ಯಂ ಮಾಡುವುದಕ್ಕಾಗಿ ನಾವು ರಾಷ್ಟ್ರವಾಗಿದ್ದೇವೆ. ಅದು ಸೈನಿಕ ಮತ್ತು ಆರ್ಥಿಕ ಶಕ್ತಿಯನ್ನು ಬಳಸಿ ಜಗತ್ತಿನ ದೊಡ್ಡಣ್ಣನಾಗುವ ಆಕಾಂಕ್ಷೆಗಿಂತ ಭಿನ್ನವಾದುದು. ಸಮಾಜ ಮತ್ತು ನೆಲದ ನಡುವೆ ಒಂದು ಮಹತ್ ಉದ್ದೇಶಕ್ಕಾಗಿ ಒಟ್ಟಾಗಿರುವುದು ರಾಷ್ಟ್ರೀಯತೆ. ಇದರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹತ್ತಾರು ಪುಸ್ತಕಗಳು ವಿಶ್ವದ ಹಲವು ಕಡೆಗಳಲ್ಲಿ ಪ್ರಕಟವಾಗಿವೆ. ನಾನಾ ಆಯಾಮಗಳಲ್ಲಿ ಅವು ಚರ್ಚೆಯಾಗಿವೆ. ಈ ಎಲ್ಲದರ ಚಿಂತನೆಯ ಆಧಾರ ನೇಶನ್ – ಸ್ಟೇಟ್ಸ್ ಕಲ್ಪನೆ ಇರಬೇಕೋ, ಬೇಡವೋ ಎಂಬುದು ಮತ್ತು ನಮ್ಮ ಕಲ್ಪನೆಯ ಧರ್ಮಾಧಾರಿತ, ಮೌಲ್ಯಾಧಾರಿತ, ಜಗತ್ತಿನ ಒಳಿತಿಗಾಗಿರಬೇಕೋ ಎಂಬುದೇ ಆಗಿದೆ. ಇಂಥದ್ದೇ ಚಿಂತನೆಗಳನ್ನು ಅಂದು ಗುರೂಜಿಯವರು, ದೀನದಯಾಳ ಉಪಾಧ್ಯಾಯರು ಮತ್ತು ಠೇಂಗಡಿಯವರು ವ್ಯಕ್ತಪಡಿಸಿದ್ದರು. ಅಂಥ ಚಿಂತನೆಗಳು ನಮ್ಮ ಪ್ರಾಚೀನ ಕಾಲದ ಋಷಿಮುನಿಗಳಿಂದಲೂ ಪ್ರಕಟವಾಗಿತ್ತು. ಅದು ಇಂದಿಗೂ ಅತ್ಯಂತ ಪ್ರಸ್ತುತವಾದದ್ದು.
ಜಿ20ರ ನೇತೃತ್ವ ಭಾರತಕ್ಕೆ ಸಿಕ್ಕಿರುವಾಗ ನಾವು ವ್ಯಕ್ತಪಡಿಸಬೇಕಾದ ಅಭಿಪ್ರಾಯಗಳು ಈ ಹಿನ್ನೆಲೆಯದ್ದು ಎಂದು ನನಗನಿಸುತ್ತದೆ. ಈಗಿನ ವಿದೇಶಾಂಗ ಸಚಿವ ಜಯಶಂಕರ್ ಅವರು ನಾಲ್ಕು ವರ್ಷಗಳ ಹಿಂದೆ The India Way: Strategies for an Uncertain World ಎಂಬ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಅದರಲ್ಲಿ ಅವರು ಬದಲಾಗುತ್ತಿರುವ ಜಾಗತಿಕ ವಾತಾವರಣದಲ್ಲಿ ನಾವು ಮೂರ್ಖರಾಗದೆ strategyಗಳನ್ನು ರೂಢಿಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲವರು ಕೃಷ್ಣನಂತಹ ನೀತಿಯ ಆವಶ್ಯಕತೆಯನ್ನು ಮನಗಂಡು ಭಾರತದ ಸ್ಥಾನವನ್ನು ಬಲಪಡಿಸಿಕೊಳ್ಳುವ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಧರ್ಮ ನನ್ನ ಕಡೆಗಿದ್ದರೆ ಅದೇ ದೊಡ್ಡ ಸ್ಟ್ರಾಟಜಿ ಎನ್ನುವುದನ್ನು ಅರ್ಜುನ-ದುರ್ಯೋಧನರ ಉದಾಹರಣೆಯ ಮೂಲಕ ವಿವರಿಸಿದ್ದಾರೆ. ಆದ್ದರಿಂದ ಗುರೂಜಿಯವರು ‘ನಮ್ಮ ಜಾಗತಿಕ ಧ್ಯೇಯ’ದಲ್ಲಿ ತಿಳಿಸಿರುವ ಧರ್ಮದ ಕುರಿತ ದೃಷ್ಟಿ ಇಂದಿಗೆ ಹೆಚ್ಚು ಪ್ರಸ್ತುತವಾಗುತ್ತದೆ. ಅವರು ಹೇಳುವ ಸಂತುಲನ ಕೂಡ ಧರ್ಮದ ಒಂದು ಭಾಗ.


ವ್ಯಕ್ತಿಯಲ್ಲ, ವಿಚಾರ ಶಾಶ್ವತ : ಹೀಗೆ ಗುರೂಜಿಯವರು ತಮ್ಮ ದೀರ್ಘಾವಧಿಯಲ್ಲಿ ಅನೇಕ ಸಂಗತಿಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಎಲ್ಲಾ ಚಿಂತನೆಗಳು ಸನಾತನ ಚಿಂತನಗಳ ನಿರಂತರತೆ. ದೀನದಯಾಳರು ಏಕಾತ್ಮ ಮಾನವ ದರ್ಶನವನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದಾಗ ಅವರು ‘ನಾನೀಗ ಮಂಡಿಸುತ್ತಿರುವುದು ನನ್ನ ವಿಚಾರಗಳನ್ನಲ್ಲ. ಯಾವುದನ್ನು ಆಚಾರ್ಯ ಚಾಣಕ್ಯ, ಆದಿ ಶಂಕರರು ಮತ್ತು ಅವರಿಗಿಂತಲೂ ಮುಂಚಿನವರು ವ್ಯಕ್ತಪಡಿಸಿದ್ದರೋ ಅದನ್ನೇ ಮಂಡಿಸುತ್ತಿರುವುದು. ಇದು ಆ ವಿಚಾರಗಳ ನಿರಂತರತೆ’ ಎಂದಿದ್ದರು. ಗುರೂಜಿ ಚಿಂತನೆಗಳನ್ನು ಆ ದೃಷ್ಟಿಯಿಂದ ಗ್ರಹಿಸಬೇಕಾಗಿದೆ.
ವ್ಯಕ್ತಿಗಳು ಬಂದಿದ್ದಾರೆ, ಹೋಗಿದ್ದಾರೆ. ಆ ಸಂದರ್ಭದಲ್ಲಿ ಅವರವರ ಚಿಂತನೆಗಳು ಹುಟ್ಟಿದವು. ವ್ಯಕ್ತವಾದವು. ಆದರೆ ದೃಷ್ಟಿ ಮತ್ತು ಚಿಂತನೆ ಸನಾತನವಾದದ್ದು. ಇಂದಿನ ಜಗತ್ತಿಗೆ ಮತ್ತು ಮುಂದಿನ ಜಗತ್ತಿಗೂ ಅದು ಅತ್ಯಂತ ಪ್ರಸ್ತುತವಾದದ್ದು.

Leave a Reply

Your email address will not be published.

This site uses Akismet to reduce spam. Learn how your comment data is processed.