ಬೆಂಗಳೂರು: ಸ್ವದೇಶಿ, ಸ್ವಾವಲಂಬನೆ, ಸಾರ್ವಭೌಮತೆಯನ್ನು ಧ್ಯೇಯವನ್ನಾಗಿಟ್ಟುಕೊಂಡು, ಜಾಗತೀಕರಣದಿಂದಾಗಿ ಭಾರತಕ್ಕಾಗುತ್ತಿರುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸ್ಥಾಪನೆಯಾದ ಸಂಘಟನೆ ಸ್ವದೇಶಿ ಜಾಗರಣ ಮಂಚ್. ಆದರೆ ಸ್ವಾವಲಂಬನೆಯ ಸಾಧನೆ ಸುಲಭವಲ್ಲ. ಆರ್ಥಿಕ ಸ್ವಾವಲಂಬಿಗಳಾಗುವುದಕ್ಕೂ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಅರ್ಥಶಾಸ್ತ್ರಜ್ಞ ಪ್ರೊ. ಬಿ. ಎಂ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಗ್ರೌಂಡ್ (ಶಾಲಿನಿ ಗ್ರೌಂಡ್ಸ್)ನಲ್ಲಿ ಫೆಬ್ರವರಿ 7 ರಿಂದ 11, 2024ರ ವರೆಗೆ ಸ್ವದೇಶಿ ಜಾಗರಣ ಮಂಚ್ – ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದೇಶಿ ಬಂಡವಾಳದ ಅತಿಯಾದ ಅವಲಂಬನೆಯಿಂದಾಗಿ ಅವರೊಡನೆ ಸ್ಪರ್ಧಿಸಲಾಗದೆ ಭಾರತೀಯ ಸ್ವದೇಶಿ ಬ್ರ್ಯಾಂಡ್ ಗಳು ಮೌಲ್ಯ ಕಳೆದುಕೊಂಡವು. ವಿದೇಶಿ ಬಂಡವಾಳಗಳನ್ನು ನೆಚ್ಚಿಕೊಂಡ ಕಾರಣ ಪ್ರಮುಖವಾದ ಉತ್ಪನ್ನ ಕ್ಷೇತ್ರಗಳಲ್ಲಿ ವಿದೇಶಿ ಬ್ರ್ಯಾಂಡ್ ಗಳು ವಿಜೃಂಭಿಸಿ, ಭಾರತೀಯ ಬ್ರ್ಯಾಂಡ್ ಗಳು ಮೂಲೆಗುಂಪಾದವು ಎಂದು ನುಡಿದರು.

ನಮ್ಮ ಕಂಪೆನಿಗಳು ಗಟ್ಟಿಮುಟ್ಟಾಗಿ ನಿಲ್ಲುವವರೆಗೂ ವಿದೇಶಿ ಬಂಡವಾಳಬೇಕು ಸ್ವದೇಶಿ ಕಂಪೆನಿಗಳು ಬೆಳೆದ ಹಾಗೆ ವಿದೇಶಿ ಕಂಪೆನಿಗಳನ್ನು ದೂರ ಕಳಿಸಬೇಕು. ಸ್ವದೇಶಿ ಜಾಗರಣ ಮಂಚ್ ಈ ನಿಟ್ಟಿನಲ್ಲಿ ವಿದೇಶಿ ಬಂಡವಾಳ ಪ್ರಮಾಣ ಹೇಗಿರಬೇಕು ಎಂದು ಜಾಗೃತಿ ಮೂಡಿಸುತ್ತಿದೆ. ಸರ್ಕಾರಗಳಿಗೂ ವಿದೇಶಿ ಬಂಡವಾಳ ಸ್ವಾವಲಂಬನೆ ಕಲ್ಪನೆಯ ವಿರುದ್ಧವಾದದ್ದು ಎನ್ನುವುದನ್ನು ತಿಳಿಸಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ ಭಾರತ ಹಳ್ಳಿಗಳಿಂದ ಕೂಡಿರುವ ರಾಷ್ಟ್ರ. ಹಳ್ಳಿಗಳ ಉದ್ಧಾರ ಆದರೆ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ. ಭಾರತವನ್ನು ಸಮೃದ್ಧಶಾಲಿ ರಾಷ್ಟ್ರ ಮಾಡಬೇಕೆನ್ನುವ ಉದ್ಧೇಶದಿಂದ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನುಡಿದರು.

ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸೌಲಭ್ಯಗಳು ತಲುಪಬೇಕು. ಸ್ವಾವಲಂಬಿಗಳಾಗುವ ಶಕ್ತಿ ಪ್ರತಿಯೊಬ್ಬರಿಗೂ ಬರಬೇಕು. ಇಲ್ಲಿನ ಯುವಕರು ಉದ್ಯೋಗದಾತರಾಗಬೇಕು. ಕೃಷಿಪ್ರಧಾನ ರಾಷ್ಟ್ರದಲ್ಲಿ ಗುಡಿಕೈಗಾರಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಕು. ಸ್ವದೇಶಿ ವಸ್ತುಗಳ ಬಳಕೆ ಮಾಡುವ ಮೂಲಕ ರಾಷ್ಟ್ರದ ಆರ್ಥಿಕತೆಗೆ ಬಲ ತುಂಬಬೇಕು. ಈ ರೀತಿಯ ಸ್ವದೇಶಿ ಮೇಳಗಳ ಮೂಲಕ ರಾಷ್ಟ್ರದ ಪ್ರಜೆಗಳಿಗೆ, ಮುಂದಿನ ಪೀಳಿಗೆಗೆ ಜಾಗೃತಿ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ ಚಿಕ್ಕಂದಿನಿಂದಲೂ ಬರಿ ಸೋಲಿನ ಇತಿಹಾಸವನ್ನು ಕೇಳಿಕೊಂಡು ಬೆಳೆದ ನಮಗೆ ರಾಮಮಂದಿರ ವಿಜಯದ ಸಂಕೇತವಾಗಿ ನಿಲ್ಲುತ್ತದೆ. ‌ನಮ್ಮ ಚಿಂತನೆ ಸ್ವದೇಶಿಯಾಗಬೇಕು‌. ಬಳಕೆಯ ವಸ್ತುಗಳು ಸ್ವದೇಶಿಯಾಗಿರಬೇಕು. ಇಡೀ ಜೀವನಶೈಲಿ ಸ್ವದೇಶಿತನದಿಂದ ಕೂಡಿರಬೇಕು.

ಜಯನಗರದ ಶಾಸಕ ಸಿ.ಕೆ.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ನಟ ಪ್ರಕಾಶ್ ಬೆಳವಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸ್ವದೇಶಿ ಮೇಳದ ಸಂಯೋಜಕ ಅಶ್ವತ್ಥ್ ನಾರಾಯಣ, ಸಂಚಾಲಕಿ, ನಟಿ ಟಿ ಎಸ್ ತಾರಾ ಅನೂರಾಧ, ಸಂಘಟಕ ಅಮಿತ್ ಅಮರನಾಥ್ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.