ಇಂದು ಜಯಂತಿ

ಕನ್ನಡದ ರಾಷ್ಟ್ರಕವಿಗಳಲ್ಲೊಬ್ಬರು, ಜಿ ಎಸ್ ಎಸ್ ಎಂದೇ ಗುರುತಿಸಿಕೊಂಡವರು ಜಿ.ಎಸ್ ಶಿವರುದ್ರಪ್ಪ. ವಿಮರ್ಶಕರಾಗಿ, ಕವಿಗಳಾಗಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರ. ಇಂದು ಅವರ ಜಯಂತಿ.


ಪರಿಚಯ
ಕವಿ ಜಿ.ಎಸ್ ಶಿವರುದ್ರಪ್ಪ ಅವರು ಫೆಬ್ರವರಿ 7, 1926 ರಂದು ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಗುಗ್ಗರಿ ಶಾಂತವೀರ ಶಿವರುದ್ರಪ್ಪ. ಅವರ ತಂದೆ ಶಾಂತವೀರಪ್ಪ, ತಾಯಿ ವೀರಮ್ಮ.
ಅವರು ಶಿಕಾರಿಪುರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದರು. ನಂತರ ಎಂ.ಎ ಪದವಿ ಮುಗಿಸಿದರು. ದಾವಣಗೆರೆಯ ಡಿ.ಆರ್ ಎಮ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಅವರು ಕುವೆಂಪು ಅವರ ವಿದ್ಯಾರ್ಥಿ ಮತ್ತು ಅನುಯಾಯಿಯಾಗಿದ್ದು, ಕುವೆಂಪು ಅವರ ಸಾಹಿತ್ಯ ಕೃತಿಗಳಿಂದ ಹೆಚ್ಚು ಪ್ರೇರಿತರಾಗಿದ್ದರು.


ವೃತ್ತಿ

ಜಿ.ಎಸ್ ಶಿವರುದ್ರಪ್ಪ ಅವರು 1966 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಅವರು ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿ ಆಯ್ಕೆಯಾದರು. ದಾವಣಗೆರೆ, ಶಿವಮೊಗ್ಗ, ಮೈಸೂರು ಮುಂತಾದ ಕಡೆ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 1986ರಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದರು. 1987–90ರ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.


ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಪ್ರಾಚೀನ ಕನ್ನಡ ಸಾಹಿತ್ಯವನ್ನು ಸಂಧಾನ ಮಾಡಿದ ವಿದ್ವಾಂಸರ ತಂಡದಲ್ಲಿ ಜಿಎಸ್ಎಸ್ ಪ್ರಮುಖರಾಗಿದ್ದರು. ಆಧುನಿಕ ಸಮಾಜದಲ್ಲಿ ಅವುಗಳನ್ನು ಪ್ರಸ್ತುತಪಡಿಸಲು ಯಶಸ್ವಿ ಪ್ರಯತ್ನ ಮಾಡಿದ್ದಾರೆ. ಇವರ ಸಂಪಾದಕತ್ವದಲ್ಲಿ “ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ” ಆರು ಸಂಪುಟಗಳಲ್ಲಿ ಪ್ರಕಟಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಗೆ ಮಹತ್ವದ ಕೊಡುಗೆಯಾಗಿದೆ.

ಕೃತಿಗಳು
ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಕಾರ್ತಿಕ, ಚಕ್ರಗತಿ,ಅನಾವರಣ, ತೆರೆದ ದಾರಿ, ಪ್ರೀತಿ ಇಲ್ಲದ ಮೇಲೆ, ಕಾಡಿನ ಕತ್ತಲಲ್ಲಿ, ಜಾರಿದ ಹೂವು, ಎದೆ ತುಂಬಿ ಹಾಡಿದೆನು ಸೇರಿದಂತೆ ಅನೇಕ ಕೃತಿಗಳು ಜಿ.ಎಸ್ ಶಿವರುದ್ರಪ್ಪ ಅವರು ರಚಿಸಿದ್ದಾರೆ.


ರಾಷ್ಟ್ರಕವಿ
2006ರ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ದಿನದಂದು ಸುವರ್ಣ ಕರ್ನಾಟಕ ಸಮಯದಲ್ಲಿ ಸರ್ಕಾರ ಶಿವರುದ್ರಪ್ಪ ಅವರಿಗೆ ‘ರಾಷ್ಟ್ರಕವಿ’ ಎಂದು ಬಿರುದು ನೀಡಿ ಗೌರವಿಸಿದರು. ಜೊತೆಗೆ ಗೋವಿಂದ ಪೈ ಮತ್ತು ಕುವೆಂಪು ಅವರ ನಂತರ ಈ ಪ್ರತಿಷ್ಠಿತ ರಾಷ್ಟ್ರಕವಿ ಬಿರುದನ್ನು ಪಡೆದ ಮೂರನೇ ಕನ್ನಡದ ಕವಿ ಎಂಬ ಹೆಗ್ಗಳಿಕೆ ಪಾತ್ರರಾದರು.


ಪ್ರಶಸ್ತಿ
1974 ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ. 1982 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1984 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಪ್ರೊ. ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ, 1998 ರಲ್ಲಿ ಪಂಪ ಪ್ರಶಸ್ತಿ. 2000 ರಲ್ಲಿ ಮಾಸ್ತಿ ಪ್ರಶಸ್ತಿ , ನೃಪತುಂಗ ಪ್ರಶಸ್ತಿ ಲಭಿಸಿದೆ.


ಜಿ.ಎಸ್ ಶಿವರುದ್ರಪ್ಪ ಅವರು ಅನಾರೋಗ್ಯ ಸಮಸ್ಯೆಯಿಂದ ಡಿಸೆಂಬರ್ 23, 2013 ರಂದು ವಿಧಿವಶರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.