ಮೈಸೂರು, ಫೆ .4, 2024: ಮೈಸೂರು ಸಿನೆಮಾ ಸೊಸೈಟಿ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ ಎರಡು ದಿನಗಳ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ಸಂಪನ್ನಗೊಂಡಿತು. ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಾಹಿತಿ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಸ್ವರ್ಣ ಕಮಲ ಪ್ರಶಸ್ತಿ ವಿಜೇತ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ, ಮೈಸೂರು ಸಿನಿಮಾ ಸೊಸೈಟಿ ಅಧ್ಯಕ್ಷ ಡಾ. ಚಂದ್ರಶೇಖರ್ ಅವರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ಪರಿದೃಶ್ಯ ಸಿನಿಮೋತ್ಸವದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಯುವ ನಿರ್ದೇಶಕರು, ನಟರು, ಬರಹಗಾರರು ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭ: ಎರಡನೇ ವರ್ಷದ ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಪ್ರಯುಕ್ತ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 20 ದೇಶಗಳಿಂದ ಸುಮಾರು 30 ಭಾಷೆಗಳ 304 ಕ್ಕೂ ಹೆಚ್ಚು ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಭಾಗವಹಿಸಿದ್ದವು. ಆಯ್ಕೆಯಾದ 25 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳಿಗೆ ಚಿತ್ರೋತ್ಸವದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳ ಕುರಿತು ಸಂವಾದ:
ಕಿರುಚಿತ್ರದ 2 ನೇ ದಿನ ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಕನ್ನಡದ ಹೊಸ ಅಲೆಯ ಚಿತ್ರಗಳು ವಿಷಯದ ಕುರಿತು ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ಹೊಸ ಅಲೆಯ ಚಿತ್ರಗಳೊಂದಿಗಿನ ತಮ್ಮ ಸುದೀರ್ಘ ಪಯಣ ಮತ್ತು ಆ ಕುರಿತ ಅಭಿಪ್ರಾಯಗಳನ್ನು ಹಂಚಿಕೊಂಡರು.

ಹೊಸ ಅಲೆಯ ಚಿತ್ರಗಳು ಮೊದಲು ಪ್ರಾರಂಭವಾಗಿದ್ದು ಕನ್ನಡದಲ್ಲಾದರೂ, ಹೊಸ ಅಲೆಯ ಸಿನಿಮಾಗಳ ಸ್ವರ್ಣ ಮಹೋತ್ಸವವನ್ನು ಕೇರಳದಲ್ಲಿ ಆಚರಿಸಲಾಯಿತು. ಕನ್ನಡ ಚಿತ್ರರಂಗದ ನಿರಾಸಕ್ತಿಯೇ ಇದಕ್ಕೆ ಕಾರಣ. ಜಾಗತಿಕ ಸಿನಿಮಾ ರಂಗಕ್ಕೆ ಕನ್ನಡ ಚಿತ್ರರಂಗದ್ದು ದೊಡ್ಡ ಕೊಡುಗೆಯಿದೆ. ಅದನ್ನು ಯಾರೂ ಗುರುತಿಸುತ್ತಿಲ್ಲ ಎನ್ನುವ ಕೊರಗು ನನ್ನಲ್ಲಿತ್ತು. ಆ ಕೊರಗನ್ನು ಪರಿದೃಶ್ಯ ಚಿತ್ರೋತ್ಸವ ನೀಗಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಸಮಾಜವಾದಿ ಚಿಂತನೆಯ ಮುಖಾಂತರ ಹೊಸ ಅಲೆಯ ಚಿತ್ರಗಳು ಹುಟ್ಟಿಕೊಂಡವು. ಆದರೆ ಹೊಸ ಅಲೆಯ ಚಿತ್ರಗಳನ್ನು ಅದರ ಮೇಲ್ನೋಟಕ್ಕಷ್ಟೇ ಸೀಮಿತವಾಗಿಸಿ ವಿಶ್ಲೇಷಿಸುವ ಮುಖಾಂತರ ತಪ್ಪು ವ್ಯಾಖ್ಯಾನ ಮಾಡಲಾಗಿದೆ. ‘ಸಂಸ್ಕಾರ’ ಹೊಸ ಅಲೆಯ ಮೊದಲ ಕನ್ನಡ ಚಿತ್ರ. ಸಂಸ್ಕಾರ ಚಿತ್ರದ ಮುಂಚಿನ ಸಿನಿಮಾಗಳಲ್ಲಿ ಭಾವುಕ ನೆಲೆಯಲ್ಲಿ ಅಥವಾ ಭಾವನಾತ್ಮಕವಾಗಿ ಉದ್ರೇಕಿಸುವ ಕಥೆಯನ್ನು‌ ಮಾತ್ರ ಕಟ್ಟಲಾಗುತ್ತಿತ್ತು. ಭಾವನಾತ್ಮಕವಾಗಿ ಉದ್ರೇಕಕ್ಕೆ ಒಳಪಡಿಸದೆ, ವೈಚಾರಿಕವಾಗಿ ಪ್ರಭಾವಿಸುವ ಕಥೆಯನ್ನು ಕಟ್ಟುವ ‘ಟ್ರೆಂಡ್’ ಹುಟ್ಟುಹಾಕಿದ್ದು ಸಂಸ್ಕಾರ. ಆದ್ದರಿಂದ ‘ಸಂಸ್ಕಾರ’ ಚಿತ್ರವನ್ನು ಕನ್ನಡದ ಮೊದಲ ಹೊಸ ಅಲೆಯ ಸಿನಿಮಾ ಎಂದು ಗುರುತಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಪ್ರೇಕ್ಷಕರ ಕೆಲವು ತಪ್ಪುಕಲ್ಪನೆಗಳಿಂದ ಹೊಸ ಅಲೆಯ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಇವತ್ತಿನ ಕನ್ನಡ ಸಿನಿಮಾಗಳು ಕನ್ನಡತನವನ್ನು ಎತ್ತಿ ಹಿಡಿಯುತ್ತಿವೆ‌. ಆದರೂ ತಮಿಳು ಮತ್ತು ತೆಲುಗು ಚಿತ್ರಗಳ ಪ್ರಭಾವ ಕನ್ನಡ ಚಿತ್ರಗಳ ಮೇಲೆ ಸಾಕಷ್ಟು ಉಂಟಾಗಿದೆ ಎನ್ನುವುದನ್ನೂ ಒಪ್ಪಿಕೊಳ್ಳಲೇಬೇಕಾಗಿದೆ. ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ವ್ಯಾಮೋಹಕ್ಕೆ ಬಲಿಯಾದರೆ ಹಿಂದಿ‌ ಸಿನಿಮಾಗಳು ಯಾವ ಸಮಸ್ಯೆಗಳನ್ನು ಎದುರಿಸಿತ್ತೋ ಅದೆಲ್ಲವನ್ನೂ ಎದುರಿಸಬೇಕಾಗುತ್ತದೆ. ಸ್ಥಳೀಯತೆಯ ಆಧಾರದಲ್ಲಿ ಕಟ್ಟಿಕೊಡಬಹುದಾದ ಯಾವುದೇ ಕಥೆಗಳನ್ನು ಕಳೆದುಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕೇವಲ ಮನೋರಂಜನಾತ್ಮಕ ಮಾಧ್ಯಮವಾಗಿ ಅಲ್ಲದೆ ವೈಚಾರಿಕವಾಗಿ ಚಿಂತನೆಗೆ ಹಚ್ಚುವ, ಚಿತ್ರಗಳನ್ನು ಹೊಸ ಅಲೆಯ ಚಿತ್ರಗಳು ಎಂದು ಕರೆಯಬಹುದು. ಅಂತಹ ಚಿತ್ರಗಳು ಸಾರ್ವಕಾಲಿಕವಾಗಿ ಸಲ್ಲುತ್ತವೆ ಎಂದು ಅವರು ವ್ಯಾಖ್ಯಾನಿಸಿದರು.
ವಿಭಿನ್ನ ಚಿತ್ರಗಳ ಮುಖಾಂತರ ಗಮನ ಸೆಳೆದಿರುವ ನಿರ್ದೇಶಕ ಶ್ರೀನಿವಾಸ್ ಕೌಶಿಕ್ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಉದಯೋನ್ಮುಖ ಸಿನೆಮಾ ರಚನಾಕಾರರ ಜೊತೆಗೆ ಸಂವಾದ:
ಕಿರುಚಿತ್ರಗಳ ನಿರ್ಮಾಣಕಾರರ ಸಂವಾದದಲ್ಲಿ ಈಶಾನ್ಯ ಶರ್ಮಾ ಕೆ ಆರ್, ವಿಘ್ನೇಶ್ ಪರಮಶಿವಂ, ಭುವನ್ ಸತ್ಯ, ನಿತೀಶ್ ಡಂಬಲ್ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

Leave a Reply

Your email address will not be published.

This site uses Akismet to reduce spam. Learn how your comment data is processed.