*ಜ್ಯೋತಿರ್ಮಯಿ ವಿಶ್ವಾತ್ಮಂ,ಶಿಕ್ಷಕರು,ಬಾಗಲಕೋಟೆ

ಭಾರತಮಾತೆಯ ಮಡಿಲಲ್ಲಿ ಬಹಳಷ್ಟು ವೈವಿಧ್ಯತೆ ಹೊಂದಿರುವ ಸಂಸ್ಕ್ರತಿಗಳನ್ನು ಕಾಣಬಹುದು. ಮಣ್ಣಿನ ಮಕ್ಕಳ ಹಬ್ಬಗಳು, ಸಡಗರಗಳು ವಿಭಿನ್ನ ವೈಶಿಷ್ಟ್ಯ.

ಅಸ್ಥಿರವಾದ ಈ ಜಗತ್ತಿನಲ್ಲಿ ಸುಸ್ಥಿರವಾದ ಒಂದು ದೇವಸತ್ಯವಿದೆ.ಆ ದೇವನು ಮಾನವನಲ್ಲ, ವ್ಯಕ್ತಿಯಲ್ಲ ಅದೊಂದು ಶಕ್ತಿ .ಅಸ್ಥಿತ್ವತತ್ವ್ತ.ಅರಿವಿನ ಸಾಗರ.ಅದೇ ಪ್ರಕೃತಿ .

ನಿಸರ್ಗಕ್ಕೂ ಬದುಕಿಗೂ ಅದೆಂತಹ ಅನ್ಯೋನ್ಯತೆಯ ಸಂಬಂಧ . ಪ್ರತಿ ಖುಷಿಯೂ ಸಡಗರವೂ, ಸಂಭ್ರಮವು ಪ್ರಕೃತಿಯೊಂದಿಗೆ ಸಮಾಗಮ. ಇಂತಹ ವೈಶಿಷ್ಟ್ಯಗಳ ಮುತ್ತುಗಳಲ್ಲಿ ಮಕರಸಂಕ್ರಮಣ ಒಂದು.
ನೇಸರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ದಾಟುವ ಹೊತ್ತು ಹಾಗು ನೇಸರನು ಮಕರರಾಶಿಯನ್ನು ಸೇರುವ ದಿನ.ಆ ಹಬ್ಬಕ್ಕೆ ಸಂಕ್ರಾಂತಿ ಎಂದು ಹೆಸರು. ನೆಲದರಿಮೆಯಂತೆ(Geography) ಯಾವುದೇ ನೆಲದಲ್ಲಿ ಸರಿಸಮವಾಗಿ ಹೊತ್ತುಮೂಡುವುದು ಮತ್ತು ಹೊತ್ತುಮುಗಿಯುವುದು ವರ್ಷದ ಎರಡೇ ದಿನಗಳು, ಆ ದಿನಗಳನ್ನು ಸರಿಯಿರುಳು (equinox) ಎಂದು ಕರೆಯುತ್ತಾರೆ.
ಅಂದು ಹಗಲಿರುಳುಗಳು ದಿನವನ್ನು ಸರಿಪಾಲಾಗಿ,ಅಂದರೆ ತಲಾ 12 ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರುಷದ ಉಳಿದ ದಿನಗಳಲ್ಲಿ ಹಗಲಿರುಳುಗಳು ಸರಿಸಮನಾಗಿರದೇ ಬೇಸಿಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ ಮತ್ತು ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು ಇರುತ್ತದೆ. ಸರಿಯಿರುಳಿನ ದಿನಗಳ ಹೊರತಾಗಿ ಹೊತ್ತುಮೂಡುವುದು(Sunrise) ಮೂಡಣದ ಬಲಕ್ಕೆ ಅಂದರೆ ಬಡಗಣಕ್ಕೆ ಇಲ್ಲವೇ ಎಡಕ್ಕೆ ಅಂದರೆ ತೆಂಕಣಕ್ಕೆ ಆಗುತ್ತದೆ. ಚಳಿಗಾಲ ಹೆಚ್ಚಾದಂತೆ ಹೊತ್ತುಮೂಡುವುದು ಹೆಚ್ಚು ತೆಂಕಣ ದಿಕ್ಕಿಗೆ ವಾಲುವುದು ಕಾಣುತ್ತದೆ. ಕೊನೆಗೆ ಒಂದು ದಿನ ತೆಂಕಣ ತುತ್ತ ತುದಿಯ ಹಂತವನ್ನು ತಲುಪಿ ನಿಲುಗಡೆಗೊಂಡು, ಮರುದಿನದಿಂದ ಹೊತ್ತುಮೂಡುವುದು ಮರಳಿ ಎದುರು ದಿಕ್ಕಿನಲ್ಲಿ ಆಗುತ್ತಾ ಹೋಗುತ್ತದೆ.
ಅಂದರೆ ನೇಸರ ಇನ್ನು ತೆಂಕಣ ದಿಕ್ಕಿನತ್ತದ ತನ್ನ ಓಟವನ್ನು ನಿಲ್ಲಿಸಿ ಬಡಗಣ ದಿಕ್ಕಿನತ್ತ ಸಾಗುತ್ತಾನೆ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ನರಿವು ಹಾಗೂ ಇದನ್ನು ಚಳಿಗಾಲದ ನೇಸರ ತಿರುವು’ (Winter Solstice with Tropical of Capricorn) ಎಂದೂ ಕರೆಯುವರು, ಗ್ರೆಗೋರಿಯನ್ ಕ್ಯಾಲೆಂಡರ್ದಲ್ಲಿ ಡಿಸೆಂಬರ್ 22ರಂದು ಸಂಕ್ರಮಣವಾದರೆ (Winter Solstice) ನಮ್ಮ ಸಾಂಪ್ರದಾಯಿಕ ಕ್ಯಾಲೆಂಡರನಂತೆ ಜನವರಿ 14 ಮಕರ ಸಂಕ್ರಮಣ ಆಗುತ್ತದೆ (Sun moves into the Capricorn zodiac known as Makara Sankanti).

ಮಕರಸಂಕ್ರಾಂತಿ ಎಂಬುದು ಉತ್ತರಾಯಣ ಪುಣ್ಯಕಾಲ.ಕೇವಲ ಬದುಕನ್ನು ಮಾತ್ರವಲ್ಲ ಸಾವೆಂಬ ಶಾಂತಿಯನ್ನು ಹೊಂದಲು ಉತ್ತರಾಯಣ ಶ್ರೇಷ್ಠವೆಂದು ಹೇಳಲಾಗಿದೆ. ಮಹಾಭಾರತದ ಭೀಷ್ಮ ದೇಹ ತ್ಯಜಿಸಲು ಶರಶಯ್ಯೆಯಲ್ಲಿ ಉತ್ತರಾಯಣದ ಕಾಲದವರೆಗೂ ಹರಿಸ್ಮರಣೆ ಮಾಡುತ್ತಾ ಕಾದಿದ್ದರು ಎಂಬುದನ್ನು ಓದಿದ್ದೇವೆ. ಸಮಸ್ತ ದೇವತಾ ಕಾರ್ಯಸೂಚಿಯ ಪ್ರಕಾರ ಶುಭಕಾರ್ಯಗಳಿಗೆ ಶ್ರೇಷ್ಟ ಕಾಲ ಸಂಕ್ರಮಣ ಕಾಲ. ಈ ಪುಣ್ಯ ಕಾಲದಲ್ಲಿ ಸೂರ್ಯಯನನ್ನು ಆರಾಧಿಸಲು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳುಬೆಲ್ಲ ಹಂಚುವುದು ರೂಢಿ. ಮಹಿಳೆಯರಿಗೆ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಮಾನವನ ಬದುಕು ನಿಸರ್ಗದ ಬದಲಾವಣೆಯೊಂದಿಗೆ ಹೊಂದಿಕೊಳ್ಳಲು ಹಿರಿಯರು ರೂಢಿಸಿಕೊಂಡು ಬಂದ ಒಂದು ಮಹೋನ್ನತ ಮಹದಾಸೆಯ ಸಂಪ್ರದಾಯ. ಎಲ್ಲರ ಜೀವನದಲ್ಲಿ ಶಾಂತಿ ನೆಮ್ಮದಿ ಸುಖ ತುಂಬಿ ಎಲ್ಲರ ಮನದಲ್ಲೂ ಸಹಬಾಳ್ವೆಯ ಕಿಚ್ಚು ಹಚ್ಚುವ ಏಕೈಕ ಹಬ್ಬ ಸಂಕ್ರಾಂತಿ.

ಭಾರತದ ಇತರ ಭಾಗಗಳಲ್ಲಿ ಆಚರಣೆ

ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಮೂಲಕ ಆಚರಿಸಲಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಎಲ್ಲಾ ವಯಸ್ಸಿನ ಜನರು ಮಕರ ಸಂಕ್ರಾಂತಿಯನ್ನು ಗಾಳಿಪಟಗಳನ್ನು ಹಾರಿಸುವ ಮೂಲಕ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ನಡೆಸುವ ಮೂಲಕ ಆಚರಿಸುತ್ತಾರೆ. ರಾಜಸ್ಥಾನದಲ್ಲಿ, ಈ ಹಬ್ಬವನ್ನು “ಸಕ್ರತ್” ಎಂದು ಕರೆಯಲಾಗುತ್ತದೆ ಮತ್ತು ಗುಜರಾತ್ನಲ್ಲಿ ಇದನ್ನು “ಉತ್ತರಾಯಣ” ಎಂದು ಕರೆಯಲಾಗುತ್ತದೆ. ಭಾರತದ ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರದಲ್ಲಿ ಇದನ್ನು “ತಿಳ್ಗುಲ್” ಎಂದು ಕರೆಯಲಾಗುತ್ತದೆ. ವಿವಾಹಿತ ಮಹಿಳೆಯರಿಗೆ “ಹಳದಿ-ಕುಂಕುಮ್” ಎಂದು ಕರೆಯಲಾಗುವ ಮತ್ತು ಪಾತ್ರೆಗಳು ಸೇರಿದಂತೆ ಉಡುಗೊರೆಗಳನ್ನು ನೀಡುವ ವಿಶೇಷ ದಿನವಾಗಿದೆ.

ಪಂಜಾಬ್ ಮತ್ತು ಜಮ್ಮು ಪ್ರದೇಶದಲ್ಲಿ, ಈ ಹಬ್ಬವನ್ನು “ಲೋಹ್ರಿ” ಎಂದು ಆಚರಿಸಲಾಗುತ್ತದೆ. ಇದನ್ನು ಅಸ್ಸಾಂನಲ್ಲಿ “ಭೋಗಾಲಿ ಬಿಹು” ಮತ್ತು ಕಾಶ್ಮೀರದಲ್ಲಿ “ಶಿಶಿರ್ ಸಂಕ್ರಾತ್” ಎಂದು ಸಹ ಆಚರಿಸಲಾಗುತ್ತದೆ. ಬಂಗಾಳದಲ್ಲಿ ಇದನ್ನು “ಪೌಶ್ ಸಂಕ್ರಾಂತಿ” ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪವಿತ್ರ ಗಂಗಾ ನದಿಯು ಸಮುದ್ರವನ್ನು ಸಂಧಿಸುವ ಸ್ಥಳವಾದ ಗಂಗಾಸಾಗರದಲ್ಲಿ ಸ್ನಾನ ಮಾಡಲು ಮತ್ತು ಎಲ್ಲಾ ಐಹಿಕ ಪಾಪಗಳನ್ನು ತೊಳೆದುಕೊಳ್ಳಲು ಯಾತ್ರಾರ್ಥಿಗಳು ಸೇರುತ್ತಾರೆ.

ವಿವಿಧ ರಾಜ್ಯದ ಆಚರಣೆಗಳ ಬಗ್ಗೆ ತಿಳಿಯು ವಾಗ ಎಳ್ಳು ಮತ್ತು ಬೆಲ್ಲದ ಸೇವನೆ ಹಾಗೂ ವಿನಿಮಯ ಪ್ರತಿಯೊಂದು ರಾಜ್ಯದ ಆಚರಣೆ ಯಲ್ಲಿನ ಪ್ರಮುಖ ಅಂಗವಾಗಿರುವುದು ಕಂಡು ಬರುತ್ತದೆ. ಋತು ಬದಲಾವಣೆಯ ಈ ಸಮಯ ದಲ್ಲಿ ದೇಹಕ್ಕೆ ಬೇಕಾದ ಉಷ್ಣತೆ ಸ್ನಿಗ್ಧತೆ ಕಾಪಾಡಿ ದೇಹವನ್ನು ಸಮತೋಲನ ಸ್ಥಿತಿಯಲ್ಲಿ ಇರಿಸಲು ಇದು ಅವಶ್ಯ. ನಮ್ಮ ಹಿರಿಯರ ಪ್ರತಿ ಆಚರಣೆಯಲ್ಲೂ ಆರೋಗ್ಯ ದ ಬಗ್ಗೆ ಇದ್ದ ಕಾಳಜಿಯನ್ನು ಇದು ಎತ್ತಿ ತೋರಿಸುತ್ತದೆ.ಇನ್ನು ಬಂಧು ಮಿತ್ರರ ಭೇಟಿ ಎಳ್ಳು ವಿನಿಮಯ ಇದೆಲ್ಲವೂ ಸಾಮಾಜಿಕ ಬಾಂಧವ್ಯಗಳ ಜತನಿಕೆಗೆ ಅವಶ್ಯ. ಇಂದಿನ ಈ ಕಾಲಕ್ಕಂತೂ ಇದು ಮತ್ತೂ ಹೆಚ್ಚು ಪ್ರಸ್ತುತವಾಗುತ್ತದೆ. ಪರಸ್ಪರ ಸ್ನೇಹ ಸಂಬಂಧ ಒಡನಾಟ ಗಳು ಮಾನಸಿಕ ಸದೃಢತೆಗೆ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಸಹಕಾರಿ. ಹೊಂದಿ ಬಾಳುವ ಹಂಚಿ ತಿನ್ನುವ ಪ್ರವೃತ್ತಿಯನ್ನು ಅದು ಕಲಿಸುತ್ತದೆ. ಈ ಹಬ್ಬದ ನೆಪದಲ್ಲಾದರೂ ಹಿಂದಿನ ವೈಮನಸ್ಯ ಕಳೆದು ಹೊಸ ಸ್ನೇಹ, ಪ್ರೀತಿ ಮೂಡಲೆಂದು ಹಬ್ಬದ ಆಚರಣೆಗಳ ಮೂಲ ಧ್ಯೇಯ. ನಾವು ಅದರ ಹಿಂದಿನ ಸದುದ್ದೇಶವನ್ನು ಮನಗಂಡು ಸರಿಯಾದ ರೀತಿಯಲ್ಲಿ ನಡೆಯಬೇಕು ಅಷ್ಟೇ. ಏಕತಾನತೆಯಿಂದ ಹೊರ ಬಂದು ಮನಸ್ಸು ಪ್ರಫುಲ್ಲಿತ ವಾಗಲು ಇಂತಹ ಸಾಮೂಹಿಕ ಆಚರಣೆಗಳು ಇಂದಿನ ಮೂಲಭೂತ ಅವಶ್ಯಕತೆ ಅಂದರೆ ತಪ್ಪಲ್ಲ.

ಮಾನವ ಸಂಕ್ರಾಂತಿ ಮರೆತರೂ ನಿಸರ್ಗದ ಸಂಕ್ರಾಂತಿ ಎಂದಿಗೂ ಮರೆಯಾಗುವುದಿಲ್ಲ. ಸಂಕ್ರಾಂತಿ ಮರೆತ ದಿನದಿಂದಲೇ ಮಾನವನ ಅವಸಾನ ಖಚಿತ ಎಂದು ಹೇಳಬಹುದು. ಅದಕ್ಕೆಂದೇ ಮಹಾನ್ ಯೋಗಿಗಳು ಜ್ಞಾನಿಗಳು ಸಂಕ್ರಾಂತಿಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಮನುಷ್ಯ ಜನುಮ ಸಂಕ್ರಾಂತಿ ಮಹತ್ವ ಮರೆಯದಿರಲಿ…
ಸಂಕ್ರಾಂತಿಯಂದು ಜೀವನದಲ್ಲಿ ಕೆಲವು ಸಂ-ಕ್ರಾಂತಿಗಳಾಗಲಿ ಎಂದು ಹಾರೈಸುತ್ತೇನೆ.

Leave a Reply

Your email address will not be published.

This site uses Akismet to reduce spam. Learn how your comment data is processed.