ಪತ್ರಿಕಾ ಸ್ವಾತಂತ್ರ್ಯ ಎಂಬುದು ಅತ್ಯಂತ ಮುಖ್ಯವಾದುದು.ಪರ,ವಿರೋಧ,ಸೈದ್ಧಾಂತಿಕ ಭಿನ್ನತೆಗಳು ಮನುಷ್ಯರ ನುಡುವಿನ ಗೋಡರಗಳಾಗದೆ ವಿಚಾರ ಮಂಥನಕ್ಕೆ ಸೇತುವೆಗಳಾಗಬೇಕಿದೆ.ಆದರೆ ತನ್ನ ವಿಚಾರವನ್ನು ವಿರೋಧಿಸುವವರ ಮೇಲೆ ಗೂಂಡಾವರ್ತನೆ ನಡೆಸುವುದು, ಅವರನ್ನು ಸುತ್ತುವರೆದು ಗುಂಪುಗಾರಿಕೆಯ ಮೂಲಕ ದೈಹಿಕವಾಗಿ ಹಲ್ಲೆ ಮಾಡುವುದು ವೈಚಾರಿಕವಾಗಿ ಅತ್ಯಂತ ಕೆಳಮಟ್ಟದ ಸ್ಥಿತಿಯಲ್ಲೂ ಒಪ್ಪತಕ್ಕಂತಹ ಕೆಲಸವಲ್ಲ.

ಇತ್ತೀಚಿಗೆ ಪಠ್ಯಪುಸ್ತಕ ಪುನರ್ ಪರಿಷ್ಕರಣೆಯ ವಿರುದ್ಧ ಅನೇಕ ಎಡಪಂಥೀಯ ವಿಚಾರಧಾರೆಯ ಸಂಘಟನೆಗಳು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.ಇದನ್ನು ವರದಿ ಮಾಡಲು ತೆರೆಳಿದ್ದ ಸಂವಾದ ಡಿಜಿಟಲ್ ಚ್ಯಾನಲ್‌ನ ಪತ್ರಕರ್ತರಾದ ಶ್ರೀ ತೇಜ ತಿಮ್ಮಪ್ಪ ಅವರ ಮೇಲೆ ಕನ್ನಡ ಪರ ಸಂಘಟನೆಯೆಂದು ತನ್ನನ್ನು ತಾನು ಕರೆದುಕೊಳ್ಳುವ ರಣಧೀರಪಡೆಯ ಅಧ್ಯಕ್ಷ ಭೈರಪ್ಪ ಹರೀಶ್‌ಕುಮಾರ್ ತಳ್ಳಾಟ ನಡೆಸಿ,ಗುಂಪುಕಟ್ಟಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.ಪೋಲೀಸರ ಮಧ್ಯ ಪ್ರವೇಶದಿಂದ ಅಲ್ಲಿಂದ ಹೊರಬರಲು ಸಾಧ್ಯವಾಗಿದ್ದು ತೇಜರವರಿಗೆ ಯಾವುದೇ ಅಪಾಯವಾಗಿಲ್ಲ.ಆದರೆ ಕೇವಲ ವೈಚಾರಿಕ ಭಿನ್ನತೆಗಾಗಿ ಹೀಗೆ ದಾಳಿ ಮಾಡಿ ಹಲ್ಲೆ ಮಾಡುವುದು ಅಪರಾಧವೇ ಸರಿ.

ಅನೇಕ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಥವಾ ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳಿಗೆ ಎಡಪಂಥೀಯ ಚಿಂತನೆಯುಳ್ಳಂತಹ,ಸಮಾಜವಾದಿ ಚಿಂತನೆಯ, ಮುಸ್ಲಿಂ ಪತ್ರಕರ್ತರೂ ವರದಿ ಮಾಡಲು ಬಂದಾಗ ಅತ್ಯಂತ ಗೌರವಯುತವಾಗಿಯೇ ನಡೆಸಿಕೊಂಡಿರುವ ಘಟನೆಗಳು ನಮ್ಮ ಕಣ್ಣಮುಂದೆಯೇ ಇದೆ.ಆದರೆ ಭಿನ್ನ ನಿಲುವುಗಳಿದ್ದರೂ ಗೌರವದಿಂದ ಕಾಣುವ ಪರಿಪಾಠ ಕೇವಲ ಏಕ ಮುಖವಾಗಿ ಹರಿಯಲು ಸಾಧ್ಯವಿಲ್ಲ.ಸಮಾಜದ ಮುಖ್ಯವಾಹಿನಿಯಲ್ಲಿರುವ ಪತ್ರಕರ್ತರಿಗೆ ಹೀಗೆ ಅವಮಾನ ಮಾಡುವುದಾದರೆ, ಅದೂ ಕನ್ನಡ ನಾಡು ನುಡಿಯ ಹೆಸರಿನ ಹೋರಾಟವನ್ನು ಮುಖವಾಡದಂತೆ ಹಾಕಿಕೊಂಡು ಹೀಗೆ ಫ್ಯಾಸಿಸ್ಟ್‌ಗಳಂತೆ ವರ್ತನೆ ಮಾಡುವುದು ಸಮಾಜಕ್ಕೆ ಹಾನಿಕಾರಕ.

ಅದರಲ್ಲೂ ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಿರುವ ಕನ್ನಡದ ಡಿಜಿಟಲ್ ಚ್ಯಾನೆಲ್‌ನ, ದಲಿತ ಪತ್ರಕರ್ತರ ಮೇಲೆ ಹೀಗೆ ಅಮಾನುಷವಾಗಿ ದಾಳಿ ಮಾಡುವುದು ಪ್ರತ್ಯಕ್ಷವಾಗಿಯೇ ಕನ್ನಡದ ಸಂಸ್ಕೃತಿಗೆ ಮಾಡುವ ಅಪಚಾರವಲ್ಲವೆ? ಕನ್ನಡದ ಸಂಸ್ಕೃತಿ ಪತ್ರಕರ್ತರನ್ನ ಹೀಗೆ ಎಂದಿಗೂ ನಡೆಸಿಕೊಳ್ಳಲು ಸಾಧ್ಯವಿಲ್ಲ.ಹಾಗಿರುವಾಗ ಕನ್ನಡ ಸಂಸ್ಕೃತಿಯ ರಾಯಭಾರಿಗಳಂತೆ ವರ್ತಿಸುವ ಕಿಡಿಗೇಡಿ ಸಂಘಟನೆಗಳು ಇದನ್ನು ಕನ್ನಡದ ಸಂಸ್ಕೃತಿಯೆಂಬಂತೆ ಸಮರ್ಥಿಸಿಕೊಳ್ಳುವುದು ಕನ್ನಡನಾಡಿಗೆ ಮಾಡಿರುವ ಅಪಮಾನ. ಫ್ಯಾಸಿಸಮ್ಮಿನ ವಿರೋಧ ಮಾಡುತ್ತೇವೆಂದು ಬಾಯಲ್ಲಿ ಹೇಳುತ್ತಾ ಹಾಗೆ ನಡೆದುಕೊಳ್ಳುವ ಈ ಸಂಘಟನೆಗಳ ಆಷಾಢಭೂತಿತನ ನಿಜಕ್ಕೂ ಇ ಹೊತ್ತಿಗೆ ಕನ್ನಡನಾಡಿಗೆ ಅಂಟಿರುವ ಶಾಪವೇ ಸರಿ.

‘Let us agree to Disagree’ ಎನ್ನುವ ತೆರೆದ ಮನಸ್ಸು,ಉದಾರವಾದಿ ಚಿಂತನೆ, ಮತ್ತು ಭಿನ್ನತೆಗಳಿದ್ದಾಗ್ಯೂ ಮತ್ತೊಬ್ಬರ ಕಾರ್ಯವನ್ನು ಪ್ರಾಮಾಣಿಕವಾಗಿ ಗೌರವಿಸುವುದು ಮುಖ್ಯ.ಅದರಲ್ಲೂ ಪತ್ರಕರ್ತರ ಮೇಲೆ ಹೀಗೆ ಹಲ್ಲೆ ನಡೆಸುವವರಿಂದ ನಾಡು ನುಡಿ ಉಳಿಯಬಲ್ಲದೆ?

Leave a Reply

Your email address will not be published.

This site uses Akismet to reduce spam. Learn how your comment data is processed.