ಬೆಂಗಳೂರು : ಇತ್ತೀಚೆಗೆ ನಿಧನರಾದ ಕನ್ನಡದ ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ.ವಿ.ನಾಗರಾಜ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ

ಭಾವಪೂರ್ಣ ಶ್ರದ್ಧಾಂಜಲಿ.

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿದ್ದ ಕೆ.ವಿ. ತಿರುಮಲೇಶ್ ಅವರ ನಿಧನದ ವಾರ್ತೆ ಅತ್ಯಂತ ದುಃಖಕರ.

ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಾ ಕನ್ನಡಕ್ಕಾಗಿ ದುಡಿದವರು ಕೆ. ವಿ. ತಿರುಮಲೇಶ್. ಓರ್ವ ಕಥೆಗಾರನಾಗಿ ತಮ್ಮ ಎಂದಿನ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ಗಂಭೀರವಾದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸವಾಲುಗಳ ಸಂಕೀರ್ಣತೆಯನ್ನು ಪದರಗಳಲ್ಲಿ ಬಿಚ್ಚಿಡುವ ಅವರ ಸಾಹಿತ್ಯದ ಪರಿ ಅನನ್ಯ. ಜೀವನ ಪ್ರೀತಿಯ ಸೆಲೆಯಾಗಿದ್ದ ಅವರ ಚಿಂತನೆಗಳಲ್ಲಿ ವಿಶ್ವಪ್ರಜ್ಞೆ, ಅಪಾರ ಜ್ಞಾನ, ಆಳವಾದ ಅನುಭವ, ಪ್ರಾಚೀನ ದರ್ಶನಗಳ ಹೊಳಹುಗಳನ್ನೂ ಕಾಣಬಹುದು. ಜಗತ್ತಿನ ಒಳ್ಳೆಯ ವಿಚಾರಗಳ ಗಾಳಿ ಕನ್ನಡಕ್ಕೂ ಬರಲಿ ಎಂದು ಅನುವಾದದ ಕಿಟಕಿ ತೆರೆದವರು ತಿರುಮಲೇಶ ಅವರು. ಕನ್ನಡ ಸಾಹಿತ್ಯ-ಸಾರಸ್ವತ ಲೋಕಕ್ಕೆ ಅವರ ಸೇವೆ ಸದಾ ಸ್ಮರಣೀಯ.

ಅವರ ದೇಹಾಂತ್ಯವು ಸಾಹಿತ್ಯ ಕ್ಷೇತ್ರಕ್ಕೆ ಹಿರಿದಾದ ನಷ್ಟವಾಗಿದೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಭಗವಂತನು ನೀಡಲಿ ಹಾಗೂ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ.

ವಿ. ನಾಗರಾಜ್
ಕ್ಷೇತ್ರೀಯ ಸಂಘಚಾಲಕ,
ರಾಷ್ಟ್ರೀಯ ಸ್ವಯಂಸೇವಕ ಸಂಘ

30.01.2023
ಬೆಂಗಳೂರು

Leave a Reply

Your email address will not be published.

This site uses Akismet to reduce spam. Learn how your comment data is processed.