ಸಾರ್ಕ್ (SAARC) ಎಂಬ ಸಂಘಟನೆ ಕೇವಲ ಇತಿಹಾಸವಾಗಿ ಉಳಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿರುವಾಗ, ಇತ್ತ ಕಳೆದ ಜೂನ್ 6 ಬಿಮ್ಸ್ಟೆಕ್(BIMSTEC) ಸಂಘಟನೆಯ ಪಾಲಿಗೆ ಒಂದು ಐತಿಹಾಸಿಕ ಮೈಲಿಗಲ್ಲು ಎನ್ನಬಹುದು, ಅಂದಿಗೆ ಬಿಮ್ಸ್ಟೆಕ್ ಅಸ್ತಿತ್ವಕ್ಕೆ ಬಂದು ಸರಿಯಾಗಿ 25 ವರ್ಷಗಳಾದವು. ಬಂಗಾಳಕೊಲ್ಲಿಯ ಸುತ್ತಲೂ ಇರುವ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಥೈಲ್ಯಾಂಡ್, ಮ್ಯಾನ್ಮಾರ್, ನೇಪಾಳ ಹಾಗೂ ಭೂತಾನ್ ಗಳು ಬಿಮ್ಸ್ಟೆಕ್ ನ ಸದಸ್ಯ ರಾಷ್ಟ್ರಗಳು. ಜೂನ್ 6, 1997 ರಂದು ಬ್ಯಾಂಕಾಕ್ ಘೋಷಣೆಯ ಮೂಲಕ BIST-EC ಸಂಘಟನೆ ಅಸ್ತಿತ್ವಕ್ಕೆ ಬಂತು, ಹೆಸರೇ ಸೂಚಿಸುವಂತೆ ಪ್ರಾರಂಭದಲ್ಲಿ ಬಾಂಗ್ಲಾದೇಶ, ಭಾರತ, ಶ್ರೀಲಂಕಾ ಹಾಗೂ ಥೈಲ್ಯಾಂಡ್ ದೇಶಗಳು ಸಂಘಟನೆಯ ಸದಸ್ಯವಾಗಿದ್ದವು. 1997 ಡಿಸೆಂಬರನಲ್ಲಿ ಮ್ಯಾನ್ಮಾರ್ ಕೂಡ ಈ ಸಂಘಟನೆಯನ್ನು ಸೇರಿಕೊಳ್ಳುವ ಮೂಲಕ ಸಂಘಟನೆ BIMST-EC ಎಂಬ ನಾಮವನ್ನು ಪಡೆಯಿತು. 2004ರಲ್ಲಿ ನೇಪಾಳ ಹಾಗೂ ಭೂತಾನ್ ಗಳನ್ನು ಒಳಗೊಳ್ಳುವ ಮೂಲಕ ಸಂಘಟನೆ BIMSTEC ಎಂಬ ಈಗಿನ ರೂಪವನ್ನು ಪಡೆಯಿತು.

ತಾಂತ್ರಿಕ (Technical) ಹಾಗೂ ಆರ್ಥಿಕ(Economic) ಸಹಕಾರವನ್ನು ಪ್ರಧಾನ ಉದ್ದೇಶವಾಗಿ ಹೊಂದಿರುವ ಬಿಮ್ಸ್ಟೆಕ್ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾ ದೇಶಗಳನ್ನು ಕೊಂಡಿಯಂತೆ ಬೆಸೆಯುತ್ತದೆ. ಪ್ರಾಕೃತಿಕವಾಗಿ ಇದು ಹಿಮಾಲಯ ತಪ್ಪಲಿನ ದೇಶಗಳನ್ನು ಬಂಗಾಳಕೊಲ್ಲಿಯ ಸುತ್ತಲಿನ ದೇಶಗಳೊಂದಿಗೆ ಜೋಡಿಸುತ್ತದೆ. ಜಗತ್ತಿನ ಜನಸಂಖ್ಯೆಯ 23% ರಷ್ಟನ್ನು ಬಿಮ್ಸ್ಟೆಕ್ ದೇಶಗಳು ಹೊಂದಿದ್ದು ಒಟ್ಟಾಗಿ ಸುಮಾರು 3.6 ಟ್ರಿಲಿಯನ್ ಡಾಲರ್ ಜಿ.ಡಿ.ಪಿಯನ್ನು(combined GDP) ಹೊಂದಿವೆ. ಬಾಂಗ್ಲಾದೇಶದ ಢಾಕಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬಿಮ್ಸ್ಟೆಕ್ ಸಂಘಟನೆಯಲ್ಲಿ ಎಲ್ಲಾ ದೇಶಗಳಿಗೂ ಸಮಾನ ಪ್ರಾತಿನಿಧ್ಯವಿದ್ದು, ಸಮಾನ ಸ್ಥಾನಮಾನವನ್ನು ಹೊಂದಿವೆ. ಸಂಘಟನೆಯ ಪ್ರಾರಂಭದ ದಿನಗಳಲ್ಲಿ ಸದಸ್ಯ ರಾಷ್ಟ್ರಗಳು ಸುಮಾರು ಆರು ಕ್ಷೇತ್ರಗಳನ್ನು ಸಹಕಾರ ವಲಯ(sectors of cooperation) ಗಳನ್ನಾಗಿ ಗುರುತಿಸಿದ್ದವು. ನಂತರದ ದಿನಗಳಲ್ಲಿ ಈ ಸಹಕಾರ ವಲಯಗಳ ಸಂಖ್ಯೆ 15ಕ್ಕೆ ಏರಿಕೆಯಾಯಿತು.

ಇತ್ತ ಸಾರ್ಕ್ ಎಂಬ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಘಟನೆ ಬಹುತೇಕ ಸ್ತಬ್ಧವಾಗಿದೆ. 1985 ರಲ್ಲಿ ಅಸ್ತಿತ್ವಕ್ಕೆ ಬಂದ ಸಾರ್ಕ್ ನ ಮೊದಲ ಶೃಂಗ ಸಭೆಯಲ್ಲೇ ಭಯೋತ್ಪಾದನೆಯನ್ನು ಖಂಡಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಸಾರ್ಕ್ ನ ಸದಸ್ಯ ರಾಷ್ಟ್ರವಾದ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಯನ್ನು ಸತತವಾಗಿ ಉತ್ತೇಜಿಸಿತು. ಪಾಕ್ ನ ಇಂತಹ ಧೋರಣೆಯೇ ಸಾರ್ಕ್ ನ್ನು ದುರ್ಬಲಗೊಳಿಸಿತು ಎನ್ನಬಹುದು. 2014 ರಲ್ಲಿ ನೇಪಾಳದ ಕಠ್ಮ್oಡುವಿನಲ್ಲಿ ನಡೆದ ಶೃಂಗಸಭೆಯೇ ಸಾರ್ಕ್ ನ ಕೊನೆಯ ಶೃಂಗಸಭೆ. 2016ರಲ್ಲಿ ಭಾರತದ ಸೇನಾಪಡೆಗಳ ಮೇಲೆ ಉರಿಯಲ್ಲಿ ನಡೆದ ದಾಳಿಯ ಕಾರಣದಿಂದ ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಶೃಂಗಸಭೆ ನಡೆಯಲೇ ಇಲ್ಲ. ಈ ಶೃಂಗಸಭೆಯನ್ನು ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾಗಳು ಬಹಿಷ್ಕರಿಸಿದ್ದವು. ಸಾರ್ಕ್ ನ ಎರಡು ಮುಖ್ಯ ದೇಶಗಳಾದ ಭಾರತ ಹಾಗೂ ಪಾಕ್ ಗಳ ನಡುವೆ ಇತ್ತ ಯುದ್ಧವೂ ಅಲ್ಲದ ಅತ್ತ ಶಾಂತಿಯೂ ಅಲ್ಲದ ಸನ್ನಿವೇಶ ನಿರ್ಮಾಣವಾಗಿದೆ. 1985ರಿಂದ ಸಾರ್ಕ್ ಅಸ್ತಿತ್ವದಲ್ಲಿದ್ದರೂ ಅದರ ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟು ವಿಶ್ವದ ಒಟ್ಟು ವ್ಯಾಪಾರ ವಹಿವಾಟಿನ 5% ನ್ನು ದಾಟಲಿಲ್ಲ. ಹೀಗೆ ತನ್ನ ಸದಸ್ಯರ ನಡುವಿನ ಸಹಕಾರವನ್ನು ಹೆಚ್ಚಿಸಲು ಸಾರ್ಕ್ ವಿಫಲವಾಯಿತು.

ರಷ್ಯಾ-ಯುಕ್ರೇನ್ ಯುದ್ಧ, ಮ್ಯಾನ್ಮಾರ್ ನ ಪ್ರಕ್ಷುಬ್ಧ ಆಂತರಿಕ ಸ್ಥಿತಿ, ಶ್ರೀಲಂಕಾದ ಹದಗೆಟ್ಟ ಆರ್ಥಿಕ ಪರಿಸ್ಥಿತಿಗಳಿಂದ ಉಂಟಾದ ಸವಾಲುಗಳ ನಡುವೆಯೂ ಐದನೆಯ ಬಿಮ್ಸ್ಟೆಕ್ ಶೃಂಗಸಭೆ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಿತು. ಮ್ಯಾನ್ಮಾರ್ ನಲ್ಲಿ ನಡೆದ ಸೇನಾ ಕ್ಷಿಪ್ರ ಕ್ರಾಂತಿಯ ಕಾರಣದಿಂದ ಮ್ಯಾನ್ಮಾರ್ ನ್ನು ಇತ್ತೀಚೆಗೆ ನಡೆದ ಆಸಿಯಾನ್ (ASEAN) ಶೃಂಗಸಭೆ ಯಿಂದ ಹೊರಗಿಡಲಾಗಿತ್ತು. ಆದರೆ ಸದಸ್ಯ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ತಲೆ ಹಾಕದಿರುವ ನಿರ್ಧಾರಕ್ಕೆ ಬಂದ ಬಿಮ್ಸ್ಟೆಕ್ ಸಂಘಟನೆ ಮ್ಯಾನ್ಮಾರ್ ನ್ನು ಬಿಮ್ಸ್ಟೆಕ್ ಶೃಂಗ ಸಭೆಯಿಂದ ಹೊರಗಿಡಲಿಲ್ಲ. ಹೀಗೆ ಅನೇಕ ಸವಾಲುಗಳ ನಡುವೆಯೂ ಬಿಮ್ಸ್ಟೆಕ್ ಶೃಂಗಸಭೆಗಳು ಕಾಲಕಾಲಕ್ಕೆ ನಡೆಯುತ್ತಿವೆ. ಕಳೆದ ಶೃಂಗಸಭೆಯಲ್ಲಿ ಬಿಮ್ಸ್ಟೆಕ್ ತನ್ನದೇ ಆದ ಸನ್ನದನ್ನು(charter) ಹೊಂದುವ ಮೂಲಕ, ಅಂತರಾಷ್ಟ್ರೀಯ ಸಂಘಟನೆ ಎಂದು ಅಧಿಕೃತವಾಗಿ ಗುರುತಿಸಿಕೊಂಡಿದೆ. ಈ ಮೊದಲು 15 ವಿವಿಧ ಕ್ಷೇತ್ರಗಳಾಗಿ ವಿಂಗಡಿಸಲ್ಪಟ್ಟಿದ್ದ ಸಹಕಾರ ವಲಯಗಳನ್ನು ಈಗ ಪುನರ್ ವಿಭಾಗಿಸಿ 7 ಕ್ಷೇತ್ರಗಳ ಸಹಕಾರ ವಲಯಗಳನ್ನಾಗಿ ಸರಳೀಕರಿಸಿ, ಪ್ರತಿಯೊಂದು ದೇಶವೂ ಒಂದು ಸಹಕಾರ ವಲಯದ ನೇತೃತ್ವವನ್ನು ವಹಿಸಿದೆ. ಉದಾ: ರಕ್ಷಣಾ ವಲಯದ ನೇತೃತ್ವವನ್ನು ಭಾರತ ವಹಿಸಿಕೊಂಡಿದ್ದರೆ, ಸಂಪರ್ಕ ವಲಯದ ನೇತೃತ್ವವನ್ನು ಥೈಲ್ಯಾಂಡ್ ವಹಿಸಿಕೊಂಡಿದೆ. ಭಾರತವು ಢಾಕಾದಲ್ಲಿರುವ ಬಿಮ್ಸ್ಟೆಕ್ ನ ಕೇಂದ್ರ ಕಛೇರಿಯನ್ನು ಬಲಗೊಳಿಸುವುದಕ್ಕಾಗಿ 10 ಮಿಲಿಯನ್ ಡಾಲರ್ ಹಣವನ್ನು ಮೀಸಲಾಗಿರಿಸಿದೆ. ಕಳೆದ ಶೃಂಗ ಸಭೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಿಯಮಿತವಾಗಿ ಶೃಂಗಸಭೆಯನ್ನು ನಡೆಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ಬಿಮ್ಸ್ಟೆಕ್ ದೇಶಗಳ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ವಿಶೇಷ ಸಂಪರ್ಕ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸದಸ್ಯ ರಾಷ್ಟ್ರಗಳು ನಿರ್ಧರಿಸಿವೆ. ಕಳೆದ ಕೆಲವು ವರ್ಷಗಳಿಂದ ಬಿಮ್ಸ್ಟೆಕ್ ಸಂಘಟನೆ ಜಂಟಿ ಮಿಲಿಟರಿ ಕವಾಯತನ್ನು ನಡೆಸುತ್ತಿದೆ. ಇವೆಲ್ಲವುಗಳನ್ನು ನಿಸ್ಸಂಶಯವಾಗಿ ಬಿಮ್ಸ್ಟೆಕ್ ನ ಸಾಧನೆಗಳು ಎನ್ನಬಹುದು.

ಯಶಸ್ಸನ್ನು ಸಾಧಿಸಿದೆ ಎಂದ ಮಾತ್ರಕ್ಕೆ ಬಿಮ್ಸ್ಟೆಕ್ ಸಂಘಟನೆಯ ವಿಫಲತೆಗಳೇ ಇಲ್ಲ ಎನ್ನಲಾಗದು. ಸುಮಾರು 18 ವರ್ಷಗಳಿಂದ ಮುಕ್ತ ವ್ಯಾಪಾರ ಒಪ್ಪಂದ(Free Trade Agreement) ಕ್ಕಾಗಿ ಪ್ರಯತ್ನಗಳು ನಡೆಯುತ್ತಿದ್ದರೂ ಅದು ಇಂದಿಗೂ ಯಶಸ್ವಿಯಾಗಿಲ್ಲ. ಬಂಗಾಳ ಕೊಲ್ಲಿಯ ಸುತ್ತಲಿನ ಈ ರಾಷ್ಟ್ರಗಳ ನಡುವಿನ ಸಂಪರ್ಕ ವ್ಯವಸ್ಥೆ ಇಂದಿಗೂ ಸಮಾಧಾನಕರವಾಗಿಲ್ಲ. ಮ್ಯಾನ್ಮಾರ್ ನ ಸಿತ್ವೇ ಬಂದರಿನಿಂದ ಭಾರತದ ಈಶಾನ್ಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಲಾದನ್ ಯೋಜನೆ ಇಂದಿಗೂ ಪೂರ್ಣವಾಗಿಲ್ಲ. ಭಾರತ- ಮ್ಯಾನ್ಮಾರ್-ಥೈಲ್ಯಾಂಡ್ ದೇಶಗಳನ್ನು ಸಂಪರ್ಕಿಸುವ ಹೆದ್ದಾರಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬೇಕಾಗುವ ಹಣವನ್ನು ಒದಗಿಸುವ ಬಿಮ್ಸ್ಟೆಕ್ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸುವ ಪ್ರಯತ್ನಗಳು ಇನ್ನೂ ಕೈಗೂಡಿಲ್ಲ. ಈ ವೈಫಲ್ಯಗಳಿಂದ ಬಿಮ್ಸ್ಟೆಕ್ ಮುಂದಿನ ದಿನಗಳಲ್ಲಿ ಹೊರಬರಬೇಕಿದೆ.

ಆದರೆ ಈ ಎಲ್ಲಾ ವಿಫಲತೆಗಳ ನಡುವೆಯೂ ಬಿಮ್ಸ್ಟೆಕ್ ಒಂದು ಆಶಾಕಿರಣವಾಗಿ ಬಂಗಾಳಕೊಲ್ಲಿಯ ಸುತ್ತಲಿನ ರಾಷ್ಟ್ರಗಳಿಗೆ ಗೋಚರಿಸುತ್ತಿದೆ. ಬಿಮ್ಸ್ಟೆಕ್ ಪರಿಣಾಮಕಾರಿಯಾಗಿ ಕಾರ್ಯವೆಸಗುವಂತಾಗಲು ಸದಸ್ಯ ರಾಷ್ಟ್ರಗಳ ನೇತಾರರು ಇನ್ನೂ ಹೆಚ್ಚಿನ ಇಚ್ಛಾ ಶಕ್ತಿಯನ್ನು ತೋರಬೇಕಾಗುತ್ತದೆ. ಇವೆಲ್ಲವುಗಳ ನಡುವೆ ಬಿಮ್ಸ್ಟೆಕ್ ಸಂಘಟನೆಯ ಅತಿದೊಡ್ಡ ಆರ್ಥಿಕ ಹಾಗೂ ಮಿಲಿಟರಿ ಶಕ್ತಿಯಾಗಿರುವ ಭಾರತ ಬಿಮ್ಸ್ಟೆಕ್ ನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ಪರಿ ಶ್ಲಾಘನೀಯ.

-ವಿನಾಯಕ್ ಗಾಂವ್ಕರ್, ಉಪನ್ಯಾಸಕರು,ಭಾರತೀಯ ಸಂವಿಧಾನ ಹಾಗೂ ಅಂತರಾಷ್ಟ್ರೀಯ ಸಂಬಂಧಗಳು

Leave a Reply

Your email address will not be published.

This site uses Akismet to reduce spam. Learn how your comment data is processed.