ಕರ್ಣಾವತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆಯಲ್ಲಿ  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿದರು.

“ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯ ಚಳುವಳಿಯು ಸಾರ್ವತ್ರಿಕವಾಗಿತ್ತು ಮತ್ತು ಎಲ್ಲರನ್ನೂ ಒಳಗೊಂಡಿತ್ತು. ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರು ಮುಂತಾದವರ ಆಧ್ಯಾತ್ಮಿಕ ನಾಯಕತ್ವವು ದೇಶದ ಜನರನ್ನು ಮತ್ತು ಜನನಾಯಕರನ್ನು ಬ್ರಿಟಿಷ್ ಪ್ರಾಬಲ್ಯದ ವಿರುದ್ಧ ಸುದೀರ್ಘ ಪ್ರತಿರೋಧಕ್ಕೆ ಪ್ರೇರೇಪಿಸಿತು.ಮಹಿಳೆಯರು, ಬುಡಕಟ್ಟು ಸಮಾಜ ಅಷ್ಟು ಮಾತ್ರವೇ ಅಲ್ಲದೆ ಕಲೆ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಸೇರಿದಂತೆ ರಾಷ್ಟ್ರೀಯ ಜೀವನದ ಎಲ್ಲಾ ಆಯಾಮಗಳಲ್ಲಿ ಸ್ವಾತಂತ್ರ್ಯದ ಪ್ರಜ್ಞೆ ಜಾಗೃತವಾಯಿತು.

ಲಾಲ್-ಬಾಲ್-ಪಾಲ್, ಮಹಾತ್ಮಾ ಗಾಂಧಿ, ವೀರ್ ಸಾವರ್ಕರ್, ನೇತಾಜಿ-ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವೇಲು ನಾಚಿಯಾರ್, ರಾಣಿ ಗೈದಿನ್ಲು, ಮುಂತಾದವರು ತಿಳಿದಿರುವ ಮತ್ತು ಅದೆಷ್ಟೋ ಮಂದಿ ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರು ಸ್ವಾಭಿಮಾನ ಮತ್ತು ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಬಲಪಡಿಸಿದರು. ಪ್ರಖರ ದೇಶಭಕ್ತ ಡಾ. ಹೆಡಗೇವಾರ್ ನೇತೃತ್ವದಲ್ಲಿ ಸಂಘ ಸ್ಥಾಪನೆಗೊಂಡು, ಸ್ವಯಂಸೇವಕರು ತಮ್ಮ ಭೂಮಿಕೆಯನ್ನು ನಿರ್ವಹಿಸಿದರು.”

“ಸ್ವಾತಂತ್ರ್ಯವು ಶತಮಾನಗಳ ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಫಲವಾಗಿದ್ದು, ನಮ್ಮ ವೀರ ಸೇನಾನಿಗಳ ತ್ಯಾಗ ಮತ್ತು ಸಮರ್ಪಣೆಯ ಉಜ್ವಲ ಸಂಕೇತವಾಗಿದೆ.ಸ್ವಾತಂತ್ರ್ಯ ಚಳವಳಿಯ ಬಹಳ ಹಿರಿಯ ವೈಶಿಷ್ಟ್ಯವೆಂದರೆ ಅದು ಕೇವಲ ರಾಜಕೀಯ ಮಾತ್ರವಲ್ಲ, ರಾಷ್ಟ್ರೀಯ ಜೀವನದ ಎಲ್ಲಾ ಆಯಾಮಗಳು ಮತ್ತು ಸಮಾಜದ ಎಲ್ಲಾ ವರ್ಗಗಳ ಭಾಗವಹಿಸುವಿಕೆಯೊಂದಿಗೆ ಸಾಮಾಜಿಕ-ಸಾಂಸ್ಕೃತಿಕ ಚಳುವಳಿಯಾಗಿ ಹೊರಹೊಮ್ಮಿತ್ತು.ಈ ಸ್ವಾತಂತ್ರ್ಯ ಆಂದೋಲನವು ರಾಷ್ಟ್ರದ ಮೂಲಭೂತ ಅಡಿಪಾಯವನ್ನು ‘ಸ್ವ’ದ ಬಲದ ಮೇಲೆ ಅನಾವರಣಗೊಳಿಸುವ ನಿರಂತರ ಪ್ರಯತ್ನವಾಗಿ ನೋಡುವುದು ಬಹಳ ಸೂಕ್ತವೆನಿಸುತ್ತದೆ.”

ಸರಕಾರ್ಯವಾಹರು ಮಾತನಾಡುತ್ತಾ – ” ಬ್ರಿಟಿಷರು ಭಾರತೀಯರ ಐಕ್ಯತೆಯ ಮೂಲ ಮನೋಭಾವದ ಮೇಲೆ ದಾಳಿ ಮಾಡುವ ಮೂಲಕ ಮಾತೃಭೂಮಿಯೊಂದಿಗಿನ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ದುರ್ಬಲಗೊಳಿಸಲು ಸಂಚು ರೂಪಿಸಿದರು.ಅವರು ನಮ್ಮ ಸ್ಥಳೀಯ ಆರ್ಥಿಕತೆ, ರಾಜಕೀಯ ವ್ಯವಸ್ಥೆ, ನಂಬಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಮೂಲಕ ಸ್ವಾವಲಂಬಿ ವ್ಯವಸ್ಥೆಯನ್ನು ಶಾಶ್ವತವಾಗಿ ನಾಶಮಾಡಲು ಪ್ರಯತ್ನಿಸಿದರು.”

“ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ, ಕೆಲವು ಕಾರಣಗಳಿಂದ, ‘ಸ್ವ’ ಎಂಬ ಪ್ರೇರಣೆ ಕ್ರಮೇಣ ಕ್ಷೀಣಿಸಿತು ಮತ್ತು ದೇಶವು ವಿಭಜನೆಯ ಭೀಕರತೆಯನ್ನು ಎದುರಿಸಬೇಕಾಯಿತು. ಸ್ವಾತಂತ್ರ್ಯಾನಂತರ ರಾಷ್ಟ್ರೀಯ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಈ ‘ಸ್ವ’ ಪ್ರಜ್ಞೆಯನ್ನು ಅಭಿವ್ಯಕ್ತಪಡಿಸುವ ಸುಸಂದರ್ಭ ಎಷ್ಟರ ಮಟ್ಟಿಗೆ ಒದಗಿ ಬಂದಿದೆ ಎಂಬುದನ್ನು ಅವಲೋಕಿಸಲು ಇದು ಸಕಾಲವಾಗಿದೆ‌”

“ಭಾರತೀಯ ಸಮಾಜವನ್ನು ಒಂದು ರಾಷ್ಟ್ರವಾಗಿ ರೂಪಿಸುವ ಮತ್ತು ಭವಿಷ್ಯದ ಬಿಕ್ಕಟ್ಟುಗಳಿಂದ ರಾಷ್ಟ್ರವನ್ನು ರಕ್ಷಿಸುವ ಸಂಕಲ್ಪದೊಂದಿಗೆ ‘ಸ್ವ’ ಆಧಾರಿತ ಜೀವನದ ದೃಷ್ಟಿಕೋನವನ್ನು ಮರುಸ್ಥಾಪಿಸಲು ದೃಢವಾಗಿ ಬದ್ಧರಾಗಲು ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವವು ಒಂದು ಅವಕಾಶವಾಗಿದೆ” ಎಂದು ಹೇಳಿದರು.

“ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಮತ್ತು ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಭಾರತವನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಬುದ್ಧ ಸಮಾಜವಾಗಿ ರೂಪಿಸುವುದು ಅತ್ಯಂತ ಸಮಯೋಚಿತ, ಭಾರತ ಕೇಂದ್ರಿತ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರ ಮೂಲಕ ಭಾರತ ಮತ್ತೆ ವಿಶ್ವಗುರುವಿನ ಪಾತ್ರವನ್ನು ವಹಿಸಲು ಅನುವು ಮಾಡಿಕೊಡುವುದು ಈ ಸಂದರ್ಭದ ಅಗತ್ಯವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ನಾವು ನಮ್ಮ ‘ಸ್ವ’ವನ್ನು ಮರುಶೋಧಿಸಲು ಸಂಕಲ್ಪ ಮಾಡಬೇಕಿದೆ” ಎಂದು ಕರೆ ನೀಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.