ಅವಮಾನಗಳು ಅಷ್ಟು ಸಲಭವಾಗಿ ಯಾರಿಗೂ ಅರ್ಥವಾಗುವುದಿಲ್ಲ. ಏಕೆಂದರೆ ಅದು ಹಸಿವಿನಿಂದ, ಗಾಯದಿಂದ, ಶರೀರದಿಂದ ಮತ್ತು ಬುದ್ಧಿಯಿಂದ ಅರ್ಥವಾಗುವುದಲ್ಲ. ಅವಮಾನಿತರಿಗೆ ಆಗುವ ವೇದನೆ, ಅದರಿಂದ ಉತ್ಪಾದನೆ ಆಗುವ ಆಕ್ರೋಶದ ಸಂದರ್ಭದಲ್ಲಿ ಅವರು ಹೇಗೆ ನಡೆದುಕೊಂಡರು ಎನ್ನುವುದು ಮುಖ್ಯವಾಗುತ್ತದೆ.


ನಾವೆಲ್ಲರೂ ದೇವರ ಮಕ್ಕಳು ಎನ್ನುವುದು ಪ್ರಜಾಪ್ರಭುತ್ವಕ್ಕೆ ಸರಿಯಾದ ಆಧಾರವಲ್ಲ. ಪ್ರತಿಯೊಬ್ಬರೂ ಅನಂತ ಚೈತನ್ಯದ ಭಾಗವಾದಾಗ ಮಾತ್ರ ಅದು ಪ್ರಜಾಪ್ರಭುತ್ವವಾಗಿ ವ್ಯಕ್ತವಾಗುತ್ತದೆ ಎನ್ನುವುದನ್ನು ತಿಳಿಸಿದ ಅಂಬೇಡ್ಕರ್ ಉಪನಿಷತ್ತಿನ ಯಾವುದೇ ಋಷಿಗೂ ಕಡಿಮೆಯಿಲ್ಲ. ಭಾರತೀಯ ಚಿಂತನೆಯನ್ನು ಮೈಗೂಡಿಸಿಕೊಂಡವರು ಅವರು ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರದ ವತಿಯಿಂದ ಮಲ್ಲೇಶ್ವರದ ಅಖಿಲ ಹವ್ಯಕ ಮಹಾಸಭಾದಲ್ಲಿ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಅಂಬೇಡ್ಕರ್ ಅವರನ್ನು ಸಂವಿಧಾನದ ಆಶಯಗಳ ಶಿಲ್ಪಿ ಎಂದು ಕರೆಯುತ್ತೇವೆ. ಆದರೆ ಸಮಾಜವಾದ ಮತ್ತು ಪ್ರಜಾಪ್ರಭುತ್ವ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರೇ ಹೇಳಿದ್ದರೂ ಅದು ನಮ್ಮ ಸಂವಿಧಾನದ ಪೀಠಿಕೆಯಲ್ಲೇ ಇದೆ. ಇದೊಂದು ವಿಚಿತ್ರ. ಅಂಬೇಡ್ಕರ್ ಅವರ ಉದ್ದೇಶಗಳನ್ನು ವಿರೋಧಿಸಿದವರು, ಅವರ ಹೆಸರನ್ನೇ ಇಟ್ಟುಕೊಂಡು ಎಡವಟ್ಟುಗಳನ್ನು ಮಾಡಿದ್ದಾರೆ. ಅವರ ಕುರಿತು ಎಚ್ಚರವಹಿಸದಿದ್ದರೆ ಅವರ ಆಖ್ಯಾನ(ನರೇಟಿವ್)ದ ಅಂಬೇಡ್ಕರರ ಮೂಲಕ
ಅತ್ಯಂತ ಭಾರತೀಯ ಅಧ್ಯಾತ್ಮಿಕ ಸೆಲೆಯಲ್ಲಿ ಬೆಳೆದಂತಹ ಅಂಬೇಡ್ಕರರನ್ನು ತಪ್ಪುತಿಳಿದುಕೊಳ್ಳುವ ಸಂಭವವಿದೆ ಎಂದು ನುಡಿದರು.

ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆ ತಪ್ಪು. ಆದರೆ ಧರ್ಮವೇ ತಪ್ಪಲ್ಲ ಎಂದು ಅಂಬೇಡ್ಕರ್ ನುಡಿದಿದ್ದರು.ಅವರದ್ದೇ ನೆಲೆಯಲ್ಲಿ ನಾವು ನಿಂತು ನೋಡಿದಾಗ ಮಾತ್ರ ಅವರ ನೋವು ನಮಗೆ ಅರ್ಥವಾಗುತ್ತದೆ. ಅವರ ನೆಲೆಯನ್ನು ನಾವು ಅರ್ಥೈಸಿಕೊಳ್ಳಬೇಕಾದರೆ ಅವರಿಗಾದ ನೋವನ್ನುಅನುಭವಿಸಬೇಕು. ಆತ್ಮ ಪರಮಾತ್ಮನ ಕುರಿತು ದೊಡ್ಡ ಅರ್ಥದಲ್ಲಿ ಚರ್ಚೆಯನ್ನು ಮಾಡಿದ ಹಿಂದೂ ಸಮಾಜ ನೆರಳು ಬಿದ್ರೆ ನಾನು ಹಾಳಾದೆ, ನಾಯಿ ನೀರು ಕುಡಿದರೆ ಪರವಾಗಿಲ್ಲ, ಆದರೆ ಮನುಷ್ಯ ನೀರು ಮುಟ್ಟಬಾರದು ಎಂಬ ಸ್ಥಿತಿಗೆ ಬಂತು. ಯಾವ ಸಮಾಜ ಧರ್ಮವೆಂದು ಉಪನಿಷತ್ತುಗಳ ಅಧ್ಯಾತ್ಮಗಳನ್ನು ಹೇಳಿತ್ತೋ, ಅದೇ ಸಮಾಜ ಅವೆಲ್ಲವನ್ನೂ ಸುಮ್ಮನೇ ಪಕ್ಕಕ್ಕಿಟ್ಟು ಅಧರ್ಮದ ಕೆಲಸವನ್ನು ಮಾಡುತ್ತಿತ್ತು. ಇಂತಹ ಪರಿಸ್ಥಿತಿಗಳಲ್ಲಿ ಧ್ವನಿ ಎತ್ತಿದ ಬಸವಣ್ಣನವರು, ಪುರಂದರದಾಸರು, ಕನಕದಾಸರು ಮುಂತಾದವರಂತೆಯೇ ಕೆಲಸ ಮಾಡಿದವರು ಅಂಬೇಡ್ಕರ್. ಆದರೆ ಅವರನ್ನು ಭಕ್ತಿಭಂಡಾರಿ ಎಂದು ಕರೆದೆವು. ಅಂಬೇಡ್ಕರ್ ಅವರನ್ನು ಬಂಡಾಯಗಾರರೆಂದು ಕರೆದೆವು. ಆದ್ದರಿಂದ ಅಂಬೇಡ್ಕರ್ ಅವರನ್ನು ಒಂದು ಸರಿಯಾದ ದೃಷ್ಟಿಯಲ್ಲಿ ನೋಡುವುದನ್ನು ಕಲಿಯದೇ ಹೋದರೆ ಈ ದೇಶ ಬಹಳ ಕಠಿಣ ಪರಿಸ್ಥಿತಿಯನ್ನು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

ಫ್ರೆಂಚ್ ಕ್ರಾಂತಿಯ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಒಳ್ಳೆಯ ಪದಗಳು ಮುನ್ನೆಲೆಗೆ ಬಂದವು. ಈ ಶಬ್ದಗಳೇ ಕಮ್ಯುನಿಷ್ಟರ ದಾಳಗಳಾದವು. ಅಂತಹ ಸಂದರ್ಭದಲ್ಲೇ ಅಂಬೇಡ್ಕರ್ ಕಮ್ಯುನಿಸಂ ಒಂದು ಕಾಡ್ಗಿಚ್ಚಿನಂತೆ, ಅದು ಬಂದಲ್ಲೆಲ್ಲ ಮಾನವೀಯತೆಯನ್ನು ಸುಡುತ್ತದೆ. ಆದ್ದರಿಂದ ನಾನು ನನ್ನ ಅಸ್ಪೃಶ್ಯ ಬಂಧುಗಳನ್ನು ಕಮ್ಯುನಿಷ್ಟರಾಗದಂತೆ ನೋಡಿಕೊಳ್ಳಲು ಅಡ್ಡಗೋಡೆಯಂತೆ ನಿಂತಿದ್ದೇನೆ. ಏಕೆಂದರೆ ಕಮ್ಯುನಿಷ್ಟರಾದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಹೆಸರಿನಲ್ಲಿ ರಾಷ್ಟ್ರೀಯತೆಯ ವಿರುದ್ಧ ಕೆಲಸ ಮಾಡುತ್ತಾರೆ. ನಾವು ಇವರನ್ನು ಬೆಳೆಯಲು ಬಿಟ್ಟರೆ ಈ ದೇಶವನ್ನು ಒಡೆಯುತ್ತಾರೆ ಎನ್ನುವುದು ಅಂಬೇಡ್ಕರ್ ನಿಲುವಾಗಿತ್ತು ಎಂದು ತಿಳಿಸಿದರು.

ಅಂದಿನ ಕಾಲದಲ್ಲಿ ಬುದ್ಧಿವಂತರೆಲ್ಲ ಕಮ್ಯುನಿಷ್ಟರಾಗಬೇಕೆಂಬ ಭ್ರಮೆಯಲ್ಲಿದ್ದರು. ಆದರೆ ತುಂಬಾ ಓದಿ, ವಿದೇಶಗಳಲ್ಲಿ ಅಧ್ಯಯನ ಮಾಡಿ, ಇಲ್ಲಿ ಅಪಾರ ಅವಮಾನಕ್ಕೆ ಈಡಾದರೂ ಕೂಡ ಬುದ್ಧಿಯನ್ನು ಸರಿಯಾಗಿಯೇ ಇಟ್ಟುಕೊಂಡು ಕಮ್ಯುನಿಷ್ಟರ ಸಮಸ್ಯೆಯನ್ನು ಗುರುತಿಸಿದರು. ಅದರ ಜೊತೆಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದನ್ನು ತಿಳಿಸಿದರು. ನಮಗೆ ಕೇವಲ ಸ್ವಾತಂತ್ರ್ಯ ಸಾಲದು, ಸಮಾನತೆ ಬೇಕೇ ಬೇಕು. ಸಮಾನತೆ ಇಲ್ಲದ ಸ್ವಾತಂತ್ರ್ಯ ಯಾವುದಕ್ಕೂ ಉಪಯೋಗವಿಲ್ಲ. ಆದರೆ ಸ್ವಾತಂತ್ರ್ಯ ಮತ್ತು ಸಮಾನತೆಯ ಆಧಾರ ಭ್ರಾತೃತ್ವ. ಅದನ್ನು ಧರ್ಮದ ಕೆಲಸದಿಂದ ಮಾತ್ರ ಸಾಧಿಸಲು ಸಾಧ್ಯ. ಇಷ್ಟು ಸ್ಪಷ್ಟವಾಗಿ ಅಂಬೇಡ್ಕರ್ ಅವರಿಗೆ ಭಾರತೀಯ ಚಿಂತನೆ ಇತ್ತು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಇಂದು ಜೈಭೀಮ್-ಜೈಮೀಮ್ ಎಂದು ಹೇಳುವ ಸಮಾನ ಸಮಸ್ಯೆಗಳಿರುವ ವರ್ಗ ಇದೆ. ಅಂದೂ ಈ ಸಮಸ್ಯೆಗಳಿದ್ದವು. ಹೈದರಬಾದಿನ ವಿಮೋಚನೆಯ ಸಂದರ್ಭದಲ್ಲಿ ನಡೆದಿದ್ದೂ ಜೈಭೀಮ್-ಜೈಮೀಮ್. ಅಂತಹ ಸಂದರ್ಭದಲ್ಲಿ ಅಂಬೇಡ್ಕರ್ ನೇರವಾಗಿ ಏನು ಹೇಳಿದರು ಎನ್ನುವುದನ್ನು ನಾವು ತಿಳಿಯಬೇಕಿದೆ. ನಮಗೆ ಹಿಂದೂಗಳಿಂದ ತೊಂದರೆಯಾಗಿದೆ ಮತ್ತು ಸಿಟ್ಟಿದೆ. ಆದರೆ ಅದೊಂದೇ ಕಾರಣದಿಂದ ನಾವು ದೇಶ ವಿರೋಧಿಗಳಾದ, ನಿಜಾಮನ ಪರವಾಗಿ ಇಸ್ಲಾಮೀ ರಾಜ್ಯವನ್ನು ಮಾಡಬೇಕೆಂದಿರುವ ರಜಾಕಾರರಿಗೆ ಬೆಂಬಲ ನೀಡಬಾರದು. ನಾವೆಲ್ಲಾ ಕೂಡಿ ಹೋರಾಟ ಮಾಡೋಣ. ನಂತರ ನಮ್ಮೊಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದಿದ್ದರು ಎನ್ನುವುದನ್ನು ತಿಳಿಸಿದರು.

ದೇಶ ವಿಭಜನೆಯಾದ ಸಂದರ್ಭದಲ್ಲಿ ಅಂಬೇಡ್ಕರ್ ಏನು ಹೇಳಿದರು ಎನ್ನುವುದು ಇಂದಿಗೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ದೇಶದಲ್ಲಿ ಎರಡು ರೀತಿಯಲ್ಲಿ ಯೋಚನೆ ಮಾಡುವವರಿದ್ದಾರೆ. ಹಾಗಾಗಿ ಪಾಕಿಸ್ತಾನವನ್ನು ಕೊಡುವುದು ಒಳ್ಳೆಯದು. ಏಕೆಂದರೆ ಮುಸಲ್ಮಾನರಿಗೆ ಭ್ರಾತೃತ್ವ ಎನ್ನುವುದು ಕೇವಲ ಮುಸಲ್ಮಾನರ ನಡುವೆ ಇರುವುದು. ಉಳಿದವರ ಮೇಲೆ ಅವರಿಗೆ ದ್ವೇಷ ಮಾತ್ರ ಇರುವುದು. ಇಸ್ಲಾಂ ಯಾವುದೇ ಮುಸಲ್ಮಾನನನ್ನ ದೇಶಭಕ್ತನನ್ನಾಗಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು ಹಾಗೆಯೇ ಮೈ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕದ ರೂಪದಲ್ಲಿ ಬರೆದರು. ಅದರ ಪ್ರಕಾರ ಭಾರತ ಪಾಕಿಸ್ತಾನ ಬೇರೆ ಆಗುವುದಾದರೆ ಶತ ಪ್ರತಿಶತ ಎಲ್ಲಾ ಹಿಂದೂ ಮತ್ತು ಮುಸಲ್ಮಾನರು ಆಯಾ ದೇಶಗಳಿಗೆ ಹೋಗಬೇಕು. ಆದರೆ ಇದು ಸಾಧ್ಯವಾಗಲಿಲ್ಲ. ಮುಂದೆ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಅನ್ಯಾಯ, ಅನಾಚಾರ, ಅತ್ಯಾಚಾರಗಳು ನಡೆದಾಗ ಭಾರತೀಯರಾದ ನಮ್ಮ ಕರ್ತವ್ಯ ಎಲ್ಲಾ ಹಿಂದೂಗಳನ್ನು ಭಾರತಕ್ಕೆ ಕರೆತರುವುದಾಗಿರಬೇಕು. ಅವರೆಲ್ಲರಿಗೂ ನಾಗರಿಕತೆ ಕೊಡಬೇಕು ಎಂದಿದ್ದರು. ಅಂದು ಅಂಬೇಡ್ಕರ್ ಹೇಳಿದ್ದೇ ಇಂದು ಸಿಎಎ ಮೂಲಕ ನಡೆಯುತ್ತಿದೆ ಎಂದರು.

ಅಂದು ಅಂಬೇಡ್ಕರ್ ಕಂಡಿದ್ದ ಕನಸು ಇಂದು ಒಂದೊಂದೇ ನೆರವೇರುವ ಸನ್ನಿವೇಷಗಳು ನಡೆಯುತ್ತಿವೆ. ವಿಧಿ 370ನ್ನು ನಾನು ಒಪ್ಪುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಆದರೂ ಸಂವಿಧಾನದಲ್ಲಿ ಅದನ್ನು ಸೇರಿಸಲಾಯಿತು. ಅಂದು ಸಂವಿಧಾನದೊಳಗೆ ಸೇರಿದ್ದ ವಿಧಿ 370 ಇಂದಿಲ್ಲ.ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ವಿಚಾರಕ್ಕಾಗಿ ರಾಜೀನಾಮೆ ನೀಡಿದರು. ಒಂದು ಖಂಡ-ತುಂಡವಾಗಿದ್ದ ರಾಷ್ಟçವನ್ನು ಕೂಡಿಸದೇ ಹೋದರೆ ಭಾರತವನ್ನು ಕಟ್ಟುವುದು ಹೇಗೇ? ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ಅದಕ್ಕೆ ಸರ್ವರಿಗೂ ಸಮಾನವಾಗಿರುವಂತಹ ಸಂಹಿತೆ ಬೇಕು ಎಂದು ಹೇಳುತ್ತಾರೆ. ಆದರೆ ಸಂಪೂರ್ಣ ರಾಷ್ಟçಕ್ಕೆ ಒಂದೇ ಸಂಹಿತೆ ಬರಲಿಲ್ಲ. ಅಂದು ಹಿಂದೂ ಕೋಡ್ ಬಿಲ್ ಬಂತು. ಅದರ ಜೊತೆಗೆ ಡೈರೆಕ್ಟಿವ್ ಪ್ರಿನ್ಸಿಪಲ್ಸ್ನಲ್ಲಿ ಇಂದು ಹಿಂದೂ ಕೋಡ್ ಬಿಲ್ ಬಂದಿದೆ, ಮುಂದೊಂದು ದಿನ ಇಡೀ ರಾಷ್ಟçಕ್ಕೆ ಸಮಾನ ಕಾನೂನು ತರಬಹುದು ಎನ್ನುವುದನ್ನು ಸೇರಿಸಿದರು. ಏಕೆಂದರೆ ಸಮಾನ ನಾಗರಿಕ ಕಾನೂನು ದೇಶಕ್ಕೆ ಸಂಬಂಧಪಟ್ಟ ವಿಷಯ, ಅವರವರ ಮತಕ್ಕೆ ಸಂಬಂಧಿಸಿದ್ದಲ್ಲ ಎಂದಿದ್ದರು. ಈಗ ಪ್ರಾರಂಭವಾಗಿರುವ ಸಮಾನ ನಾಗರಿಕ ಸಂಹಿತೆಯ ಚರ್ಚೆ ಅಂಬೇಡ್ಕರರ ಕನಸು. ಇಂದು ಭಾರತ ಅಂಬೇಡ್ಕರ್ ಕನಸಿನ ಭಾರತದತ್ತ ಹೆಜ್ಜೆ ಇಡುತ್ತಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.