ಪುತ್ತೂರು: ಸ್ವಾತಂತ್ರ್ಯ ಹೋರಾಟಕ್ಕೆ ವೇಗವರ್ಧಕವಾದ ಗೀತೆ ವಂದೇ ಮಾತರಂ. ಕಳೆದ 150 ವರ್ಷಗಳಲ್ಲಿ ರಾಷ್ಟ್ರಭಕ್ತಿಯ ಗಂಗಾಪ್ರವಾಹದಂತೆ ವಂದೇ ಮಾತರಂ ಕಾರ್ಯನಿರ್ವಹಿಸಿದೆ. ಇಂದಿಗೂ ದೇಶದಲ್ಲಿ ಕೇಳಸಿಗುವ ಅನೇಕ ಅಪಸ್ವರವನ್ನು ಹೋಗಲಾಡಿಸಿ ಸಂಪೂರ್ಣ ದೇಶವನ್ನು ಒಂದಾಗಿ ಜೋಡಿಸುವ ಶಕ್ತಿ ವಂದೇ ಮಾತರಂ ಗೀತೆಗಿದೆ. ವಂದೇ ಮಾತರಂ ರಾಷ್ಟ್ರೀಯ ಅಭಿವ್ಯಕ್ತಿಯಾಗಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.


ಮಂಥನ ಪುತ್ತೂರು ವತಿಯಿಂದ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕಿನಲ್ಲಿ ‘ವಂದೇಮಾತರಂ – 150’ ವಿಷಯದ ಕುರಿತು ಆಯೋಜಿಸಲಾದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬ್ರಿಟಿಷರಿಗೆ ವಿಶಾಲವಾಗಿದ್ದ ಅಖಂಡಭಾರತವನ್ನು ಆಳ್ವಿಕೆ ಮಾಡುವುದು ಸುಲಭವಿರಲಿಲ್ಲ.ಹಾಗಾಗಿ ಬ್ರಿಟಿಷ್ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಅವರ ವಿಚಾರಕ್ಕೆ ಗುಲಾಮರಾಗುವ ಭಾರತೀಯರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದ್ದರು. ಆದರೆ ಅವರ ಶಿಕ್ಷಣ ಪದ್ಧತಿಯ ಪ್ರಕಾರ ಆರಂಭವಾದ ಮೊಟ್ಟಮೊದಲ ವಿಶ್ವವಿದ್ಯಾಲಯ ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ಬಂಕಿಮಚಂದ್ರ ಚಟರ್ಜಿ ಅವರು ಬ್ರಿಟಿಷರನ್ನು ತೊಲಗಿಸುವುದಕ್ಕೆ ಪ್ರೇರಣೆಯ ರಣಮಂತ್ರದಂತೆ ಕಾರ್ಯನಿರ್ವಹಿಸಿದ ವಂದೇಮಾತರಂ ಅನ್ನು ರಚಿಸಿದರು..

1875ರಲ್ಲಿ ರಚನೆಯಾದ ವಂದೇ ಮಾತರಂ ಗೀತೆ ಮೊದಲಿಗೆ ಬಂಗದರ್ಶನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. 1882ರಲ್ಲಿ ಆನಂದಮಠ ಕಾದಂಬರಿಯಲ್ಲಿ ವಂದೇ ಮಾತರಂ ಅನ್ನು ಪ್ರಕಟಿಸಿದರು. 1894ರಲ್ಲಿ ಬಂಕಿಮರು ನಿಧನರಾದ ನಂತರ ಕಲ್ಕತ್ತದ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಚರ್ಚೆ ಅವರ ಕೃತಿಗಳ ಕುರಿತು ಆರಂಭವಾದ ಚರ್ಚೆ ತದನಂತರ ದಿನಗಳಲ್ಲಿ ವಂದೇ ಮಾತರಂ ಅನ್ನು ಸ್ಯಾತಂತ್ರ್ಯ ಹೋರಾಟದ ಘೋಷವಾಕ್ಯವನ್ನಾಗಿ ಮಾಡಿತು. ವಂದೇ ಮಾತರಂನ ಶ್ರೇಷ್ಠತೆಯನ್ನು ಅರಿತ ರವೀಂದ್ರನಾಥ ಠಾಗೋರ್ ಅವರು ವಂದೇ ಮಾತರಂ ಗೀತೆಯನ್ನು ರಾಷ್ಟ್ರಮಟ್ಟ ತಲುಪಿಸುವ ಸಲುವಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಲ್ಲಿ ಹಾಡಬೇಕು ಎಂದು ಸೂಚಿಸಿದರಲ್ಲದೇ, 1896ರ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವತಃ ರವೀಂದ್ರನಾಥರೇ ರಾಗಸಂಯೋಜನೆ ಮಾಡಿ ಹಾಡುತ್ತಾರೆ ಎಂದರು.

1905ರಲ್ಲಿ ಬಂಗಾಳ ವಿಭಜನೆಗೆ ಮುಂದಾದ ಬ್ರಿಟಿಷರ ವಿರುದ್ಧ ವಂಗ ಬಂಗ ಚಳುವಳಿ ಪ್ರಾರಂಭವಾಯಿತು. ವಂದೇ ಮಾತರಂ ಘೋಷವಾಕ್ಯವಾಗಿ ಪರಿಣಮಿಸಿತು. ಆ ಸಂದರ್ಭದಲ್ಲಿ ಸ್ವದೇಶಿ ಚಳುವಳಿಯನ್ನು ಮುನ್ನೆಲೆಗೆ ತರಲಾದ ಪರಿಣಾಮ ಅನೇಕ ಕ್ಷೇತ್ರಗಳಲ್ಲಿ ವಂದೇ ಮಾತರಂ ಪಸರಿಸಿತು. ಹೊಟೇಲ್, ಹಡಗು, ಪತ್ರಿಕೆ, ಧ್ವಜ, ಪುಸ್ತಕ, ಪ್ರತಿಭಟನೆಯ ಘೋಷವಾಕ್ಯ, ಮನೆ-ಕಟ್ಟಡಗಳ ಹೆಸರುಗಳು ಸೇರಿದಂತೆ ಅನೇಕ ವಿಧವಾಗಿ ವಂದೇ ಮಾತರಂ ರೂಪುಪಡೆದುಕೊಂಡಿತು. ಇದರ ಪರಿಣಾಮವಾಗಿ ಬ್ರಿಟಿಷರನ್ನು ಮತ್ತು ಅವರನ್ನು ಬೆಂಬಲಿಸುವವರನ್ನು ಸಾಮಾನ್ಯ ಜನ ಕಟುವಾಗಿ ವಿರೋಧಿಸಲು ಪ್ರಾರಂಭಿಸಿದರು. ಆಗ ಬಂಕಿಮಚಂದ್ರರು ಬರೆದ ವಂದೇ ಮಾತರಂ ಕೇವಲ ಹಾಡಾಗಿ ಉಳಿಯಲಿಲ್ಲ‌. ಅದು ರಾಷ್ಟ್ರೀಯ ಕಥನವಾಯಿತು ಎಂದು ಅಭಿಪ್ರಾಯಪಟ್ಟರು.


ವಂದೇ ಮಾತರಂ ಗೀತೆ ಭಾರತದ ಭೌಗೋಳಿಕ ವರ್ಣನೆ, ರಾಷ್ಟ್ರೀಯತೆಯ ಕುರುಹು, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಒಳಗೊಂಡಿತ್ತು. 1923ರಲ್ಲಿ ಕಾಕಿನಾಡದಲ್ಲಿ ನಡೆದ ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಮಹಮದಲಿ ಮತೀಯ ಕಾರಣಕ್ಕೆ ವಿರೋಧಿಸಿ ಸಭಾತ್ಯಾಗ ಮಾಡಿದರು. ಅದರ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಡಿನ ಭೌಗೋಳಿಕ ವರ್ಣನೆಯ ಸಾಲುಗಳನ್ನು ಉಳಿಸಿಕೊಂಡಿತು, ವಂದೇ ಮಾತರಂ ಅನ್ನು ವಿಭಜನೆ ಮಾಡಿತು. ಅದಾದ ನಂತರ 1937ರಲ್ಲಿ ಭಾರತದ ಧ್ವಜ ಸಮಿತಿ ಸೂಚಿಸಿದ ಚರಕವನ್ನೊಳಗೊಂಡಿದ್ದ ಕೇಸರಿ ಧ್ವಜವನ್ನು ತಿರಸ್ಕರಿಸಿ ಮತೀಯ ಕಾರಣಕ್ಕೆ ಮೂರು ಬಣ್ಣಗಳನ್ನು ಸೇರಿಸಲಾಯಿತು. ರಘುಪತಿ ರಾಘವ ರಾಜಾರಾಮ್ ಭಜನೆಯನ್ನು ಮತೀಯ ಕಾರಣಕ್ಕೆ ತಿರುಚಲಾಯಿತು. ಇದೆಲ್ಲದರ ಪರಿಣಾಮ 1946ರಲ್ಲಿ ಮುಸ್ಲಿಂ ಲೀಗ್ ಡೈರೆಕ್ಟ್ ಆಕ್ಷನ್ ಡೇ ಗೆ ಕರೆಕೊಟ್ಟು ಮುಂದೊಂದು ದಿನ ದೇಶ ವಿಭಜನೆಗೆ ಕಾರಣವಾಯಿತು ಎಂದರು.

1997ರಲ್ಲಿ ಸ್ವಾತಂತ್ರ್ಯೋತ್ಸವದ ಸುವರ್ಣಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಮತ್ತೊಮ್ಮೆ ವಂದೇ ಮಾತರಂ ವಿಶೇಷ ಮನ್ನಣೆಯನ್ನು ಗಳಿಸಿತು.2002ರಲ್ಲಿ ಬ್ರಿಟಿಷ್ ಬ್ರಾಡ್ ಕ್ಯಾಸ್ಟಿಕ್ ಕಾರ್ಪೋರೇಷನ್ (BBC) ತನ್ನ 70ನೇ ವರ್ಷದ ಸಂದರ್ಭದಲ್ಲಿ ಕೈಗೊಂಡ ಸರ್ವೆಯಲ್ಲಿ ವಿಶ್ವದ ಜನಪ್ರಿಯ 10 ಹಾಡುಗಳ ಪಟ್ಟಿಯಲ್ಲಿ ವಂದೇಮಾತರಂ ಎರಡನೇ ಸ್ಥಾನವನ್ನು ಪಡೆಯಿತು. ಅದಾದ ನಂತರ 2006ರಲ್ಲಿ ವಂಗಬಂಗ ಚಳವಳಿಯ ನೂರನೇ ವರ್ಷದ ಸಂದರ್ಭದಲ್ಲಿ ವಂದೇಮಾತರಂ ಪರವಿರೋಧ ಚರ್ಚೆ ಮತ್ತೊಮ್ಮೆ ಶುರುವಾಯಿತು. 2025ರ ಅಕ್ಟೋಬರ್ ನಲ್ಲಿ ವಂದೇ ಮಾತರಂ ರಚನೆಯ 150ನೇ ವರ್ಷದ ನಿಮಿತ್ತ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚಿಸಿತು. 2025ರ ನವೆಂಬರ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿ ಬೈಠಕ್ ನಲ್ಲಿ ವಂದೇ ಮಾತರಂ ಕುರಿತು ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ನಿರ್ಧರಿಸಲಾಯಿತು. 2026ರ ಫೆಬ್ರವರಿಯಲ್ಲಿ ವಂದೇ ಮಾತರಂ ಅನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ಹಾಡಬೇಕು ಎಂಬ ಶಿಷ್ಟಾಚಾರವನ್ನು ತರಲಾಯಿತು. ಇತ್ತೀಚೆಗೆ ಲೋಕಸಭೆಯಲ್ಲಿ ಸ್ವಾತಂತ್ರ್ಯಗೊಂಡ ನಂತರ ಮೊಟ್ಟಮೊದಲ ಬಾರಿಗೆ ಸಂಪೂರ್ಣ ವಂದೇ ಮಾತರಂ ಅನ್ನು ಹಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕರು, ಪತ್ರಕರ್ತರು, ವೈದ್ಯರು, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಪ್ರಮುಖರು ಭಾಗವಹಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.